ಆಸ್ತಿ ತೆರಿಗೆ ಪಾವತಿ; ಜುಲೈ 31ರವರೆಗೆ ಮಾತ್ರ ಓಟಿಎಸ್ ಗೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

“ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ನೀಡಲಾಗಿರುವ ಒನ್ ಟೈಮ್ ಸೆಟ್ಲಮೆಂಟ್ (ಓಟಿಎಸ್) ಅವಕಾಶ ಜುಲೈ 31ರವರೆಗೆ ಮಾತ್ರ ಇರಲಿದೆ. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಕೊನೆಯ ದಿನಾಂಕದ ಒಳಗಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

Written by - Prashobh Devanahalli | Edited by - Manjunath N | Last Updated : Jun 11, 2024, 05:30 PM IST
  • 20 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ಅನೇಕರು ಹೊರಗಿದ್ದಾರೆ.ತೆರಿಗೆ ಪಾವತಿಸಲು ಅವರಿಗೂ ಅವಕಾಶ ಕಲ್ಪಿಸಲಾಗಿದೆ.
  • ಅವರು ತೆರಿಗೆ ಪಾವತಿಸಿ 90 ದಿನದೊಳಗೆ ಸೂಕ್ತ ದಾಖಲೆ ಕೊಟ್ಟರೆ ಅವರಿಗೆ ಸೂಕ್ತ ಖಾತೆ ನೀಡಲಾಗುವುದು.
  • ಇನ್ನು 4 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈಗಾಗಲೇ 50 ಸಾವಿರ ಮಂದಿ ಈ ಅವಕಾಶ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿದ್ದಾರೆ.
 ಆಸ್ತಿ ತೆರಿಗೆ ಪಾವತಿ; ಜುಲೈ 31ರವರೆಗೆ ಮಾತ್ರ ಓಟಿಎಸ್ ಗೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್ title=

ಬೆಂಗಳೂರು, ಜೂ. 11 : “ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ನೀಡಲಾಗಿರುವ ಒನ್ ಟೈಮ್ ಸೆಟ್ಲಮೆಂಟ್ (ಓಟಿಎಸ್) ಅವಕಾಶ ಜುಲೈ 31ರವರೆಗೆ ಮಾತ್ರ ಇರಲಿದೆ. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಕೊನೆಯ ದಿನಾಂಕದ ಒಳಗಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಹೇಳಿದ್ದಿಷ್ಟು:

“ಚುನಾವಣೆಗಳು ನಡೆಯುತ್ತಿದ್ದ ಕಾರಣ ತೆರಿಗೆ ಪಾವತಿ ವಿಚಾರದಲ್ಲಿ ಪಾಲಿಕೆ ಒತ್ತಡ ಹಾಕಿರಲಿಲ್ಲ. ಆಸ್ತಿ ತೆರಿಗೆ ಕಟ್ಟದವರಿಗೆ ತೆರಿಗೆ ವ್ಯಾಪ್ತಿಯಲ್ಲಿ ಬರಲು ಪಾಲಿಕೆ ವತಿಯಿಂದ ನೀಡಿರುವ ಒನ್ ಟೈಮ್ ಸೆಟ್ಲಮೆಂಟ್ ಅವಕಾಶವನ್ನು ಜುಲೈ 31ಕ್ಕೆ ಅಂತಿಮಗೊಳಿಸಲಾಗುವುದು. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ.ಈ ಅವಕಾಶದಲ್ಲಿ ದಂಡದ ಮೇಲೆ ಶೇ.50 ರಷ್ಟು ವಿನಾಯಿತಿ ನೀಡಿದ್ದು, 100%ರಷ್ಟು ಬಡ್ಡಿ ಮನ್ನಾ ಕೂಡ ಮಾಡಲಾಗಿದೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ ಕಾಯ್ದೆ. ನಮ್ಮ ಸರ್ಕಾರ ಇದನ್ನು ಸರಿಪಡಿಸಲು ಮುಂದಾಗಿದೆ. ನಾಗರಿಕರು ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

20 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ಅನೇಕರು ಹೊರಗಿದ್ದಾರೆ.ತೆರಿಗೆ ಪಾವತಿಸಲು ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ತೆರಿಗೆ ಪಾವತಿಸಿ 90 ದಿನದೊಳಗೆ ಸೂಕ್ತ ದಾಖಲೆ ಕೊಟ್ಟರೆ ಅವರಿಗೆ ಸೂಕ್ತ ಖಾತೆ ನೀಡಲಾಗುವುದು. ಇನ್ನು 4 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈಗಾಗಲೇ 50 ಸಾವಿರ ಮಂದಿ ಈ ಅವಕಾಶ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಆಗಸ್ಟ್ 1ರಿಂದ ತೆರಿಗೆ ಪಾವತಿಸದಿದ್ದರೆ ಡೀಫಾಲ್ಟರ್ ಪಟ್ಟಿಗೆ ಸೇರುತ್ತಾರೆ. ಹೀಗಾಗಿ ಜುಲೈ 31ರ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿ. ಸದ್ಯದ ಲೆಕ್ಕಾಚಾರದ ಪ್ರಕಾರ 5200 ಕೋಟಿಯಷ್ಟು ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ ನಮಗೆ 1300 ಕೋಟಿ ಮಾತ್ರ ಸಂಗ್ರಹವಾಗಿದೆ. 

ಇದನ್ನೂ ಓದಿ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಾತೆ ಬದಲಾವಣೆ: ಜೋಶಿ ಹೆಗಲೇರಿದ 2 ಖಾತೆಗಳು ಯಾವುವು?

ಮೂರು ತಿಂಗಳಲ್ಲಿ ಆಸ್ತಿ ದಾಖಲೆ ಡಿಜಿಟಲೀಕರಣ ಪೂರ್ಣ:

20 ಲಕ್ಷ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮಾಡಲಾಗುತ್ತಿದೆ. ಈ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು. 20 ಲಕ್ಷ ಆಸ್ತಿಗಳ ಪೈಕಿ 8 ಲಕ್ಷ ಆಸ್ತಿಗಳ ದಾಖಲೆಗಳು ಡಿಜಿಟಲೀಕರಣವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಉಳಿದ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದ್ದೇವೆ.

ಜೂನ್ 5 ರಂದು ವಿಶ್ವ ಪರಿಸರ ದಿನ ಕಾರ್ಯಕ್ರಮ ಮಾಡಬೇಕಿತ್ತು.ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾಡಲು ಆಗಿರಲಿಲ್ಲ. ಹೀಗಾಗಿ ಜೂನ್ 14 ರಂದು ಬಾಲಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಭಾಗವಹಿಸಬಹುದು.

ಹವಾಮಾನ ವೈಪರಿತ್ಯ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿ. 40 ವಿಭಾಗದಲ್ಲಿ ಸ್ಥಾನ ಪಡೆದಿತ್ತು. ಬಿಬಿಎಂಪಿ ಕಳೆದ ವರ್ಷ ನವೆಂಬರ್ 27ರಂದು ಮೊದಲ ಹವಾಮಾನ ವೈಪರಿತ್ಯ ಕಾರ್ಯಯೋಜನೆಯನ್ನು ಅನಾವರಣಗೊಳಿಸಿತ್ತು. 

ಬ್ಲ್ಯೂ ಗ್ರೀನ್ ಊರು ಅಭಿಯಾನ:

ನಮ್ಮ ನಗರವನ್ನು ಹಸಿರಾಗಿಡಲು ಬ್ಲೂ ಗ್ರೀನ್ ಊರು ಎಂಬ ಅಭಿಯಾನ ಆರಂಭಿಸಿದ್ದು, ಹೆಚ್ಚಿನ ಮರಗಳನ್ನು ನೆಡಲು ಸಿದ್ಧತೆ ಮಾಡಲಾಗಿದೆ. ಇದರ ಜತೆಗೆ ಕ್ಲೈಮೆಟ್ ಆಕ್ಷನ್ ಸೆಲ್ ಕೂಡ ರಚಿಸಲಾಗಿದ್ದು, ಇದರಲ್ಲಿ ಬಿಡಬ್ಲ್ಯೂಎಸ್ಎಸ್ ಬಿ, ಬೆಸ್ಕಾಂ, ಬಿಎಂಟಿಸಿ, ಬಿಟಿಪಿ, ಬಿಎಂಆರ್ ಸಿಎಲ್, ಡೆಲ್ಟ್, ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಕೈಗಾರಿಕೆ, ಗಣಿಗಾರಿಗೆ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಒಳಗೊಳ್ಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಬಿಬಿಎಂಪಿ ಜಾಲತಾಣದಲ್ಲಿ ಲಭ್ಯವಿದೆ.

ಇದನ್ನೂ ಓದಿ: ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬಾರದು: ಸಿಎಂ ಸ್ಪಷ್ಟ ಸೂಚನೆ

ಹಸಿರು ರಕ್ಷಕ ಮೂಲಕ 2 ಲಕ್ಷ ಗಿಡ ನೆಡುವ ಗುರಿ:

ಇನ್ನು ಕಳೆದ ವರ್ಷ ಹಸಿರು ರಕ್ಷಕ ಕಾರ್ಯಕ್ರಮ ಅನಾವರಣ ಮಾಡಿದ್ದೆವು. ಶಾಲಾ ಮಕ್ಕಳು ತಮ್ಮ ಪ್ರದೇಶದಲ್ಲಿ ಗಿಡ ನೆಟ್ಟು ಅವುಗಳನ್ನು ಅವರೇ ಬೆಳೆಸುವ ಕಾರ್ಯಕ್ರಮ ಇದಾಗಿತ್ತು. ಈಗಾಗಲೇ 250 ಶಾಲೆಗಳ lಸಹಯೋಗದಲ್ಲಿ 52 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಪೈಕಿ ಶೇ. 80 ರಷ್ಟು ಗಿಡಗಳು ಉಳಿದುಕೊಂಡಿವೆ. 20 % ಗೆ ಬದಲಿ ಗಿಡ ನೆಡಲಾಗುವುದು.

ಶಾಲೆಗಳು ಪಾಲಿಕೆ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಗಿಡಗಳು ಆರೋಗ್ಯಕರವಾಗಿ ಬೆಳೆಯುತ್ತಿವೆಯೇ ಎಂದು ಪರಿಶೀಲಿಸಲು ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಈ ವರ್ಷ ಹೆಚ್ಚಿನ ಶಾಲೆಗಳನ್ನು ಸೇರಿಸಿಕೊಂಡು 2 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಮೂರ್ನಾಲ್ಕು ಗಿಡ ನೆಟ್ಟು ಅವುಗಳನ್ನು ಬೆಳೆಸಿ ಹಸಿರು ಕಾಪಾಡಲು ನೆರವಾಗಿ ಎಂದು ಎಲ್ಲಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಅಧ್ಯಾಪಕರು, ಮಕ್ಕಳಿಗೆ ಮನವಿ ಮಾಡುತ್ತೇನೆ.

ಬಿಬಿಎಂಪಿ ವತಿಯಿಂದ ವಲಯವಾರು ಮರಗಣತಿ ಮಾಡಲು ಟೆಂಡರ್ ಕರೆಯಲಾಗಿದೆ. ಬೊಮ್ಮನಹಳ್ಳಿ ವಲಯದ ವಿದ್ಯಾಪೀಠ, ಕತ್ತರಿಗುಪ್ಪೆ ವಾರ್ಡ್ ಗಳಲ್ಲಿ ಈಗಾಗಲೇ 94 ಸಾವಿರ ಮರಗಳ ಸರಿಯಾದ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಮೆಪಥಾನ್ ಕಾರ್ಯಕ್ರಮದ ಮೂಲಕ ಎಲ್ಲೆಲ್ಲಿ ಗಿಡ ನೆಡಲು ಅವಕಾಶವಿದೆ ಎಂದು ಸ್ಥಳ ಗುರುತಿಸಲು ಮುಂದಾಗಿದ್ದೇವೆ. ಬೊಮ್ಮನಹಳ್ಳಿ ವಲಯದಲ್ಲಿ ಈ ಪ್ರಾಯೋಗಿಕ ಪ್ರಕ್ರಿಯೆ ನಡೆದಿದ್ದು, ಸಾರ್ವಜನಿಕರು ಕೂಡ ಈ ವಿಚಾರದಲ್ಲಿ ನೆರವಾಗಬಹುದು. 

ಇನ್ನು ನಗರದಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಾವಿಗಳ ರಕ್ಷಣೆಗೆ ಪಾಲಿಕೆ ಮುಂದಾಗಿದೆ. ಇನ್ನು ನಗರದಲ್ಲಿ ಎಲ್ಲೆಲ್ಲಿ ತೆರೆದ ಬಾವಿಗಳಿವೆ ಅವುಗಳ ಮಾಹಿತಿ ಪಡೆದು ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ನಗರದಲ್ಲಿ 7 ಸಾವಿರ ಕೊಳವೆ ಬಾವಿಗಳು ಬತ್ತಿದ್ದವು. ಇವುಗಳ ಪುನಶ್ಚೇತನಕ್ಕಾಗಿ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ನಿರ್ಧರಿಸಿದ್ದೇವೆ.

ಬೆ.5 ರಿಂದ ರಾ.10 ರವರೆಗೆ ಪಾರ್ಕ್ ಓಪನ್

ಇನ್ನು ನಗರದಲ್ಲಿನ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆಯಲಾಗುತ್ತಿದೆ. ಸಾರ್ವಜನಿಕರು ಮಧ್ಯಾಹ್ನದ ವೇಳೆಯೂ ಉದ್ಯಾನಗಳನ್ನು ತೆರೆಯ ಬೇಕು ಎಂದು ಮನವಿ ನೀಡಿದ್ದು, ಹೀಗಾಗಿ ನಗರದ ಎಲ್ಲಾ ಉದ್ಯಾನಗಳನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ರವರೆಗೆ ತೆರೆಯಲು ನಿರ್ಧರಿಸಲಾಗಿದೆ. ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದ್ದು ಈ ಸಮಯ ಇಲ್ಲಿಗೆ ಅನ್ವಯವಾಗುವುದಿಲ್ಲ. ಉದ್ಯಾನವನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಇದರ ಜತೆಗೆ 22660000, 22221188 ಪಾಲಿಕೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.  9480685700 ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು.

ಇದನ್ನೂ ಓದಿ: ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬಾರದು: ಸಿಎಂ ಸ್ಪಷ್ಟ ಸೂಚನೆ

ಅನಧಿಕೃತ ಫ್ಲೆಕ್ಸ್; ಎಆರ್ ಓ ವಿರುದ್ಧವೂ ಪ್ರಕರಣ

ಪಾಲಿಕೆ ವತಿಯಿಂದ ಅನಧಿಕೃತ ಫ್ಲೆಕ್ಸ್ ನಿಷೇಧ ಮಾಡಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳ ವತಿಯಿಂದ ಫ್ಲೆಕ್ಸ್ ಹಾಕಲಾಗುತ್ತಿದೆ. ಇದನ್ನು ನಿಯಂತ್ರಿಸುವುದು ಆಯಾ ಪ್ರದೇಶದ ಸಹಾಯಕ ಕಂದಾಯ ಅಧಿಕಾರಿಯ (ARO) ಜವಾಬ್ದಾರಿಯಾಗಿದ್ದು, ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಇದ್ದರೆ, ಅನಧಿಕೃತ ಫ್ಲೆಕ್ಸ್ ಹಾಕಿದವರ ಜತೆಗೆ ಈ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಲು 1533 ಸಹಾಯವಾಣಿಯನ್ನು ಸಂಪರ್ಕಿಸಬಹುದು. 9480683939 ವಾಟ್ಸಪ್ ಮೂಲಕ ಸಾರ್ವಜನಿಕರು ಅನಧಿಕೃತ ಫ್ಲೆಕ್ಸ್ ಹಾಕಿರುವ ಫೋಟೋ ಹಾಗೂ ವಿಳಾಸ ಕಳುಹಿಸಬಹುದು. ಆಗ ಪಾಲಿಕೆ ವತಿಯಿಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. 

ಪ್ರಶ್ನೋತ್ತರ

ಭದ್ರಾ ಮೇಲ್ದಂಡೆ ಯೋಜನೆ ಹಣವೇ ಬರಲಿಲ್ಲ

ಸೋಮಣ್ಣ ಅವರು ಜಲಶಕ್ತಿ ಸಚಿವರಾಗಿರುವುದರಿಂದ ತಾರತಮ್ಯವಾಗಲಿದೆ ಎಂಬ ತಮಿಳುನಾಡು ಕಾಂಗ್ರೆಸ್ ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, “ಒಮ್ಮೆ ಸಚಿವರಾದರೆ ಅವರು, ಇಡೀ ದೇಶಕ್ಕೆ ಸಚಿವರಾಗುತ್ತಾರೆಯೇ ಹೊರತು ಅವರು ಪ್ರತಿನಿಧಿಸುವ ರಾಜ್ಯಕ್ಕೆ ಸಚಿವರಾಗುವುದಿಲ್ಲ. ಯಾವುದೇ ರಾಜಕಾರಣಿಯಾದರೂ ತಮ್ಮ ರಾಜ್ಯ ಹಾಗೂ ಊರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಸಹಜ. ನಾನು ಸಚಿವನಾಗಿದ್ದಾಗ ಪೈಲೆಟ್ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದೆ. ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಕಲುಬುರ್ಗಿಯಲ್ಲಿ ಇಎಸ್ಐ ಆಸ್ಪತ್ರೆ ಕಟ್ಟಿಸಿದರು. ಇದು ಸಹಜ. ಸೋಮಣ್ಣ ಅವರು ಈಗಷ್ಟೇ ಸಚಿವರಾಗಿ ಕಣ್ಣು ಬಿಡುತ್ತಿದ್ದಾರೆ. ನಮ್ಮ ರಾಜ್ಯದಿಂದ ಮಂತ್ರಿಯಾದವರು ರಾಜ್ಯಕ್ಕೆ ಶಕ್ತಿ ತುಂಬಲಿ. ನಿರ್ಮಲಾ ಸೀತರಾಮನ್ ಅವರು ಹಣಕಾಸು ಸಚಿವೆಯಾಗಿ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಘೋಷಣೆ ಮಾಡಿದರು. ಆದರೆ ಹಣ ಬರಲಿಲ್ಲ. ಏನು ಮಾಡಲು ಸಾಧ್ಯ? ಯಾವುದೇ ಕೆಲಸವಾದರೂ ಕಾನೂನು ಬದ್ಧವಾಗಿ ಅವಕಾಶ ಇದ್ದರೆ ಅದನ್ನು ಮಾಡುತ್ತಾರೆ. ಆದರೆ ಕಾವೇರಿ ವಿಚಾರ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ತಮಿಳುನಾಡಿನವರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಪ್ರಧಾನಮಂತ್ರಿಗಳು ಅಂತಿಮ ತೀರ್ಮಾನ ಮಾಡುತ್ತಾರೆ. ನಾವು ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ” ಎಂದರು.

ಬಿಬಿಎಂಪಿ ಚುನಾವಣೆ ಬಗ್ಗೆ ಕೇಳಿದಾಗ, “ಬಿಬಿಎಂಪಿ ಚುನಾವಣೆ ಮಾಡಲು ಮೀಸಲಾತಿ ಸೇರಿದಂತೆ ಇತರೆ ಪ್ರಕ್ರಿಯೆ ಪೂರ್ಣಗೊಳಿಸಲು ತಯಾರು ಮಾಡಿದ್ದೇವೆ. ಆದಷ್ಟು ಬೇಗ ಚುನಾವಣೆ ಮಾಡುತ್ತೇವೆ” ಎಂದರು.

ಬಿಬಿಎಂಪಿ ವಿಭಜನೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಈ ಹಿಂದೆಯೇ ಪ್ರಸ್ತಾವನೆ ಇತ್ತು. ಆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಏನೇ ಇದ್ದರೂ ಆದಷ್ಟು ಬೇಗ ಚುನಾವಣೆ ಮಾಡಲಾಗುವುದು. ನಾವು ಮಾಡದಿದ್ದರೆ ಕೋರ್ಟ್ ಬಿಡುವುದಿಲ್ಲ” ಎಂದರು.

ಕೇಂದ್ರದ ನೂತನ ಸಚಿವರಿಗೆ ಶುಭ ಕೋರುತ್ತೀರಾ ಎಂದು ಕೇಳಿದಾಗ, “ಮಾಧ್ಯಮಗಳ ಮೂಲಕವೇ ನಾನು ಕೇಂದ್ರದ ನೂತನ ಸಚಿವರಿಗೆ ಶುಭ ಕೋರುತ್ತೇನೆ. ಎಲ್ಲರೂ ರಾಜ್ಯಕ್ಕೆ ಶಕ್ತಿ ತುಂಬಲಿ, ದೇಶಕ್ಕೆ ಸೇವೆ ಮಾಡಲಿ” ಎಂದರು.

ಇನ್ನು ಘನತ್ಯಾಜ್ಯ ಸಂಗ್ರಹ ವಿಚಾರವಾಗಿ ರೂ.100 ಶುಲ್ಕದ ಬಗ್ಗೆ ಕೇಳಿದಾಗ, “ಘನತ್ಯಾಜ್ಯ ವಿಲೇವಾರಿ ನಿಯಮದಲ್ಲಿ ಹೆಚ್ಚಾಗಿದ್ದು, ಹೊಣೆಗಾರಿಕೆ ನಿಗದಿ ಮಾಡಬೇಕಿದೆ. ಬೆಂಗಳೂರಿನ ಹೊರವಲಯದ ನಾಲ್ಕು ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕಿದೆ. ಸದ್ಯದಲ್ಲೇ ಈ ವಿಚಾರವಾಗಿ ಟೆಂಡರ್ ಕರೆಯಲಾಗುವುದು. ಈ ವಿಚಾರವಾಗಿ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು” ಎಂದರು.

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಬಂಧನದ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಈ ವಿಚಾರವಾಗಿ ಗೃಹಸಚಿವರು ಮಾಹಿತಿ ನೀಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ” ಎಂದು ತಿಳಿಸಿದರು.

ಕೇಂದ್ರ ಸಚಿವ ಸಂಪುಟದಲ್ಲಿ ಕನ್ನಡಿಗರಿಗೆ ನೀಡಿರುವ ಖಾತೆಗಳ ಬಗ್ಗೆ ಕೇಳಿದಾಗ, “ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೆ ಹೆಚ್ಚಿನ ಕೈಗಾರಿಕೆ ತಂದು, ಅನುದಾನ ತಂದು ಕರ್ನಾಟಕಕ್ಕೆ ಶಕ್ತಿ ತುಂಬಲಿ” ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News