ಬೆಂಗಳೂರು: ಓಲಾ ಕ್ಯಾಬ್ನಲ್ಲಿ ಪ್ರಯಾಣಿಸುತ್ತಿದ್ದ 26 ವರ್ಷದ ಯುವತಿಯ ಮೇಲೆ ಜೂನ್ 1 ರಂದು ಅತ್ಯಾಚಾರ ಎಸಗಿದ್ದ ಚಾಲಕನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಗ್ಗೆ ಓಲಾ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.
ಮುಂಬೈ ಮಿರರ್ ಪತ್ರಿಕೆ ವರದಿ ಪ್ರಕಾರ, ಜೂನ್ 1 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲು ತಡರಾತ್ರಿ 2 ಗಂಟೆಗೆ ಮಹಿಳೆ ಓಲಾ ಯಬ್ ಬುಕ್ ಮಾಡಿದ್ದಳು. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಆಕೆಯ ಮನೆಯಿಂದ ಕ್ಯಾಬ್ ಹತ್ತಿದ್ದಾಳೆ. ಈ ಸಂದರ್ಭದಲ್ಲಿ ಕ್ಯಾಬ್ ಚಾಲಕ ವಿಮಾನ ನಿಲ್ದಾಣದ ಮಾರ್ಗವನ್ನು ಬಿಟ್ಟು ಬೇರೆ ರಸ್ತೆಯಲ್ಲಿ ಚಲಿಸಿದ್ದಾನೆ. ನಂತರ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಆಕೆಯನ್ನು ಬೆದರಿಸಿ ಬಟ್ಟೆಗಳನ್ನು ಬಿಚ್ಚಿಸಿ ಆಕೆಯ ಪೋಟೋಗಳನ್ನು ಕ್ಲಿಕ್ಕಿಸಿ, ನಂತರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಹಿಳೆ ಚಾಲಕನ ಕೃತ್ಯವನ್ನು ವಿರೋಧಿಸಲು ಪ್ರಯತ್ನಿಸಿದ್ದರಿಂದ, ಒಂದು ವೇಳೆ ಕಿರುಚಾಡಿದರೆ ತನ್ನ ಸ್ನೇಹಿತರನ್ನೂ ಕರೆಸಿ ಗ್ಯಾಂಗ್ ರೇಪ್ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಆಕೆಯ ಮೊಬೈಲ್ ಅನ್ನೂ ಸಹ ಕಸಿದುಕೊಂಡು ಕೊಲೆ ಮಾಡುವುದಾಗಿಯೂ ಹೆದರಿಸಿದ್ದ. ಘಟನೆ ನಂತರ ಆಕೆಯನ್ನು ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರಾಪ್ ಮಾಡಿದ ಚಾಲಕ, ಆಕೆ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಆಕೆಯ ಫೋಟೋಗಳನ್ನು ವಾಟ್ಸ್ ಆಪ್ನಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆದರೆ, ನಂತರ ಮಹಿಳೆ ಇ-ಮೇಲ್ ಮೂಲಕ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದು, ಎಫ್ಐಆರ್ ದಾಖಲಿಸಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಓಲಾ ಸಂಸ್ಥೆ, ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, "ಈ ಘಟನೆಗೆ ಸಂಸ್ಥೆ ವಿಷಾದ ವ್ಯಕ್ತಪಡಿಸುತ್ತದೆ. ಪ್ರಯಾಣಿಕರ ಸುರಕ್ಷತೆಗೆ ಓಲಾ ಸಂಸ್ಥೆ ಮೊದಲ ಆದ್ಯತೆ ನೀಡುತ್ತದೆ. ಈಗಾಗಲೇ ಆ ಚಾಲಕನನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇವೆ. ಈ ಪ್ರಕರಣ ಸಂಬಂಧ ಪೊಲೀಸರ ತನಿಖೆಗೆ ಅಗತ್ಯವಾದ ಎಲ್ಲಾ ಸಹಕಾರವನ್ನು ಸಂಸ್ಥೆ ನೀಡಲಿದೆ" ಎಂದಿದೆ.