ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಪ್ರಮುಖ ದಾಖಲೆಗಳನ್ನು ಹರಿದು ಹಾಕಿದ್ದ ಪ್ರಕರಣ ಸಂಬಂಧ ಇಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.
2017ರ ಆಗಸ್ಟ್ 2ರಂದು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದಿದ್ದ ಐಟಿ ದಾಳಿ ವೇಳೆ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಮಹತ್ವದ ದಾಖಲೆಗಳಿರುವ ಪೇಪರ್ ಗಳನ್ನು ಹರಿದುಹಾಕುವ ಮೂಲಕ ಸಾಕ್ಷಿ ನಾಶ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಅರ್ಥಿಕ ಅಪರಾಧಗಳ ನ್ಯಾಯಾಲಯ ಮಾರ್ಚ್ 22 ರಂದು ಖುದ್ದು ಹಾಜರಾಗುವಂತೆ ಡಿಕೆಶಿ ಗೆ ನೋಟಿಸ್ ನೀಡಿತ್ತು.
ಡಿಕೆಶಿ ವಿರುದ್ಧ ಐಪಿಸಿ ಸೆಕ್ಷನ್ 201, 204ರ ಅಡಿ ಸಾಕ್ಷ್ಯನಾಶ ಪ್ರಕರಣ ಹಾಗೂ ಐಟಿ ಕಾಯ್ದೆ 276 ಸಿ1 ಉದ್ದೇಶ ಪೂರ್ವಕ ಆದಾಯ ತೆರಿಗೆ ವಂಚನೆ ಅಡಿಯಲ್ಲಿ ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ.