ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ 35 ವರ್ಷಗಳ ಬಳಿಕ ಸಿದ್ದರಾಮಯ್ಯ ಸೈಕಲ್ ಸವಾರಿ, ಸಿದ್ದು ಸ್ಪೀಡಿಗೆ ಸುಸ್ತಾದ ಇತರರು

35 ವರ್ಷಗಳ ಬಳಿಕ ಸೈಕಲ್ ಹೊಡೆದ ಸಿದ್ದರಾಮಯ್ಯ ಅಪ್ಪಟ ದೇಸಿ ಸೊಗಡನ್ನು ಎಂದೂ ಬಿಟ್ಟುಕೊಡದ ಸಿದ್ದರಾಮಯ್ಯ. 74ನೇ ಇಸಿವಿಯಿಂದ ಸೈಕಲ್ ಹೊಡೆದೇ ಇರಲಿಲ್ಲವಂತೆ.

Written by - Yashaswini V | Last Updated : Jun 29, 2020, 11:33 AM IST
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ 35 ವರ್ಷಗಳ ಬಳಿಕ ಸಿದ್ದರಾಮಯ್ಯ ಸೈಕಲ್ ಸವಾರಿ, ಸಿದ್ದು ಸ್ಪೀಡಿಗೆ ಸುಸ್ತಾದ ಇತರರು title=

ಬೆಂಗಳೂರು: ಕಳೆದ 23 ದಿನದಿಂದ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಇಂದು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸೈಕಲ್ ಸವಾರಿ ಮಾಡಿ ಪ್ರತಿಭಟಿಸಿದರು. 

ಪ್ರದೇಶ ಕಾಂಗ್ರೆಸ್ ಘಟಕ ಸೈಕಲ್ ಸವಾರಿ ಪ್ರತಿಭಟನೆಗೆ ಕರೆ ನೀಡಿದ್ದು ಮಾಜಿ ಮುಖ್ಯಮಂತ್ರಿಯೂ ಆದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್ (DK Shivakumar) ಮತ್ತಿತರರು ಅವರ ಮನೆಯಿಂದ ಕೆಪಿಸಿಸಿ ಕಚೇರಿಗೆ ಸೈಕಲ್ ಹೊಡೆದುಕೊಂಡು ಬಂದರು. ಈ ಮೂಲಕ ಕಳೆದ 23 ದಿನದಿಂದ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿದರು.

35 ವರ್ಷಗಳ ಬಳಿಕ ಸೈಕಲ್ ಹೊಡೆದ ಸಿದ್ದರಾಮಯ್ಯ ಅಪ್ಪಟ ದೇಸಿ ಸೊಗಡನ್ನು ಎಂದೂ ಬಿಟ್ಟುಕೊಡದ ಸಿದ್ದರಾಮಯ್ಯ, 74ನೇ ಇಸಿವಿಯಿಂದ ಸೈಕಲ್ ಹೊಡೆದೇ ಇರಲಿಲ್ಲವಂತೆ. ಈಗ ಕೇಂದ್ರ ಸರ್ಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿರುವ ನಡೆಯನ್ನು ಖಂಡಿಸಲು 35 ವರ್ಷದ ಬಳಿಕ‌ ಇವತ್ತು ಸೈಕಲ್ ಹೊಡೆಯುತ್ತಿದ್ದೇನೆ ಎಂದರು.

ಕೆಪಿಸಿಸಿ (KPCC) ಕಚೇರಿಗೆ ಹೊರಡುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಒಂದು ಬ್ಯಾರಲ್ ಗೆ 130 ಡಾಲರ್ ಇದೆ. ಆದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ನನ್ನ ಪ್ರಕಾರ ಈಗ ಒಂದು ಲೀಟರ್ ಪೆಟ್ರೋಲ್ ಅನ್ನು 25 ರೂಪಾಯಿಗೆ ಮಾರಾಟ ಮಾಡಬೇಕಾಗಿತ್ತು ಎಂದರು.

ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾಗಿದ್ದಾಗ ಅಂದಿನ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಜನರಿಗೆ ಅದರ ಹೊರೆಯನ್ನು ನೀಡಿರಲಿಲ್ಲ. ಸಬ್ಸಿಡಿ ಕೊಟ್ಟು ಜನರಿಗೆ ನೆರವು ನೀಡಿತ್ತು. ಈಗಿನ ಸರ್ಕಾರ ಸಾಮನ್ಯ ಜನರ ಮೇಲೆ ದುಬಾರಿ ಬೆಲೆ ಹಾಕಿ ಹಣ ವಸೂಲಿ ಮಾಡುತ್ತಿದೆ ಎಂದರು.

ಪೆಟ್ರೋಲ್ (Petrol) ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವುದು ರೈತರಿಗೆ ಹಾಗೂ ಉದ್ಯಮಿಗಳಿಗೆ ದುಬಾರಿಯಾಗಿದೆ.‌ ಕೊರೊನಾ ಇದ್ದರೂ ಕಳೆದ 10 ದಿನಗಳಿಂದ 11 ರೂಪಾಯಿ ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಘೋಷಿಸಿರುವ ಪ್ಯಾಕೇಜ್‌ಗೆ ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಒತ್ತಾಯ

ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ  ವಿಫಲ ಆಗಿರುವ ಸರ್ಕಾರದ ಬಗ್ಗೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಸೈಕಲ್ ಸವಾರಿ ಮಾಡುತ್ತಿದ್ದ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವರಾದ ಜಮೀರ್ ಅಹಮದ್, ಚಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಚೀಫ್ ವಿಪ್ ಅಜಯ್ ಧರಂಸಿಂಗ್ ಸಾಥ್ ನೀಡಿದರು.

ಗಡಿಯಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಧಾನಿ ಮೋದಿ ಮೌನ ಸರಿಯಲ್ಲ: ಸಿದ್ದರಾಮಯ್ಯ

ಸಿದ್ದರಾಮಯ್ಯ ಸ್ಪೀಡ್ ಗೆ ಕಂಗಾಲಾದ ಕಾಂಗ್ರೆಸ್ ನಾಯಕರು ಶಿವಾನಂದ ಸರ್ಕಲ್‌ ಬಳಿಯ ತಮ್ಮ ಸರ್ಕಾರಿ ನಿವಾಸದಿಂದ ಕೆಪಿಸಿಸಿ ಕಚೇರಿ ಕಡೆ ಸೈಕಲ್ ಏರಿ ಹೊರಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ನಿಲ್ಲಲಿಲ್ಲ. 35 ವರ್ಷಗಳ ಬಳಿಕ‌ ಸೈಕಲ್ ಹೊಡೆದರೂ ತಡಬಡಿಸಲಿಲ್ಲ. 18 ನಿಮಿಷಗಳಲ್ಲಿ ಕೆಪಿಸಿಸಿ ಕಚೇರಿ ತಲುಪಿದರು. ಸಿದ್ದರಾಮಯ್ಯ ಅವರ ಸೈಕಲ್ ಸವಾರಿಯ ಸ್ಪೀಡ್ ಗೆ ಜೊತೆಯಲ್ಲಿದ್ದ ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ ಮತ್ತಿತರರು ಸುಸ್ತಾದರು.
 

Trending News