ಹುಬ್ಬಳ್ಳಿ : ಕುಕ್ಕರ್ ಬಾಂಬ್ ಸ್ಫೋಟಿಸಿದ ಭಯೋತ್ಪಾದಕರನ್ನು ಕಾಂಗ್ರೆಸ್ ನಾಯಕರು ಬ್ರದರ್ಸ್ ಎಂದು ಹೇಳುತ್ತಾರೆ, ರಾಮಭಕ್ತರನ್ನು ಅಪರಾಧಿ ಎನ್ನುತ್ತಾರೆ. ಆದರೆ ನೂರು ಸಿದ್ದರಾಮಯ್ಯ ಬಂದರೂ ರಾಮಭಕ್ತರು ಎದುರಿಸಲು ಸಿದ್ಧ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಸವಾಲೆಸೆದರು.
ಕರಸೇವಕರನ್ನು ಬಂಧಿಸಿರುವುದನ್ನು ವಿರೋಧಿಸಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಮುಟ್ಟುವುದಿಲ್ಲ. ಆದರೆ ಪ್ರತಿ ದಿನ ಆಟೋರಿಕ್ಷಾ ಓಡಿಸುವ ಅಮಾಯಕನನ್ನು ತಲೆಮರೆಸಿಕೊಂಡಿದ್ದಾನೆಂದು ಬಂಧಿಸಿದ್ದಾರೆ. ಜೈ ಶ್ರೀರಾಮ್ ಎಂದರೆ ಜೈಲಿಗೆ ಹಾಕುತ್ತಾರೆ, ಜೈ ಟಿಪ್ಪು ಎಂದರೆ ಬಿಡುಗಡೆಗೊಳಿಸುತ್ತಾರೆ. ರಾಮಭಕ್ತರನ್ನು ವಿರೋಧಿಸಿದರೆ ಹಾಗೂ ಟಿಪ್ಪು ಸಂಸ್ಕೃತಿಯನ್ನು ವಿಜೃಂಭಿಸಿದರೆ ಕಾಂಗ್ರೆಸ್ ಸರ್ಕಾರ ಬಹಳ ಕಾಲ ಉಳಿಯುವುದಿಲ್ಲ. ಟಿಪ್ಪುವಿನ ಹಿಂದೆ ಹೋದವರ ಮನೆಗಳು ಸುಟ್ಟಂತೆಯೇ ಕಾಂಗ್ರೆಸ್ ಮನೆಯೂ ಸುಡಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ದೇವರು-ಧರ್ಮದ ಹೆಸರಲ್ಲಿ ಕ್ಷುಲಕ ರಾಜಕೀಯ ಮಾಡುವುದನ್ನು ಕೈಬಿಡಿ -ಸಿಎಂ ಸಿದ್ದರಾಮಯ್ಯ ಕಿವಿ ಮಾತು
ರಾಮನಿಗೆ ಜೈ ಎಂದರೆ ಜೈಲಿಗೆ ಕಳುಹಿಸುವ ಸರ್ಕಾರ ಕರ್ನಾಟಕದಲ್ಲಿದೆ ಎಂದರೆ ಅದು ಅತ್ಯಂತ ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನದಲ್ಲಿದ್ದುಕೊಂಡು ನಾವು ರಾಮ ಎಂದು ಹೇಳಿಲ್ಲ. ಕರ್ನಾಟಕದ ಹುಬ್ಬಳ್ಳಿಯಲ್ಲಿ ರಾಮನಾಮ ಜಪ ಮಾಡಿದ್ದೇವೆ. 30 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ 2 ಸಾವಿರ ಪೊಲೀಸರು ಇದ್ದಾಗ, ಪ್ರತಿ ರಸ್ತೆಯಲ್ಲಿ ಪೊಲೀಸರು ನಿಂತು ಪರಿಶೀಲಿಸುತ್ತಿದ್ದರು. ಅಂತಹ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಕಾರಿನಲ್ಲಿ ಕೂರಿಸಿಕೊಂಡು ಒಳಗೆ ಬಂದಿದ್ದೆ. ಆಗ ಪೊಲೀಸರಿಗೆ ಗೊತ್ತಾಗಲಿಲ್ಲ. ಅಂತಹ ಹೋರಾಟವನ್ನೇ ಆಗ ನಡೆಸಿರುವಾಗ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ದೇಶದಲ್ಲಿ ನಮಗಾಗಿ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ ಎಂದರು.
ರಾಮನಿಗೆ ಜನ್ಮ ಪ್ರಮಾಣಪತ್ರವಿಲ್ಲವೆಂದ ಕಾಂಗ್ರೆಸ್ : ರಾಮಮಂದಿರವನ್ನು ಕಟ್ಟಬಾರದು ಎನ್ನುವುದು ಕಾಂಗ್ರೆಸ್ನ ಉದ್ದೇಶವಾಗಿತ್ತು. ರಾಮಜನ್ಮಭೂಮಿಯ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ 25 ವಕೀಲರನ್ನು ವಿರುದ್ಧವಾಗಿ ವಾದ ಮಾಡಲು ನೇಮಿಸಿತ್ತು. ಕಾಂಗ್ರೆಸ್ನ ವಕ್ತಾರರಾಗಿದ್ದ ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ಅಫಿಡವಿಟ್ ಹಾಕಿ, ರಾಮ ಇದ್ದಿದ್ದಕ್ಕೆ ದಾಖಲೆ ಇಲ್ಲ, ರಾಮಾಯಣ ನಡೆದಿರುವುದಕ್ಕೆ ದಾಖಲೆ ಇಲ್ಲ, ರಾಮನಿಗೆ ಜನ್ಮ ಪ್ರಮಾಣ ಪತ್ರ ಇಲ್ಲ ಎಂದಿದ್ದರು. ಅಲ್ಲಾನಿಗೆ, ಏಸು ಕ್ರಿಸ್ತನಿಗೆ ನಾವೆಂದಿಗೂ ಜನ್ಮ ಪ್ರಮಾಣಪತ್ರ ಕೇಳಿಲ್ಲ. ಅವರವರ ನಂಬಿಕೆಯನ್ನು ಬಿಜೆಪಿ ಯಾವಾಗಲೂ ಗೌರವಿಸಿದೆ ಎಂದರು.
ಇದನ್ನೂ ಓದಿ:ʼಶ್ರೀರಾಮ ವಿರೋಧಿʼ ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಗಡುವು
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಯಾರದ್ದಾದರೂ ಮನೆಗೆ ಕರೆದುಕೊಂಡು ಹೋದರೆ ಆ ಮನೆಯನ್ನೇ ಇಬ್ಭಾಗ ಮಾಡುತ್ತಾರೆ. ವೀರಶೈವ ಲಿಂಗಾಯತ ಒಂದೇ ಸಮುದಾಯದವರು. ಆದರೆ ಇಬ್ಬರೂ ಬೇರೆ ಎಂದು ಸಿದ್ದರಾಮಯ್ಯನವರು ಹುಳ ಬಿಟ್ಟರು. ಅದರ ಪರಿಣಾಮ ಜನರು ಕಾಂಗ್ರೆಸ್ನ್ನು ಕಿತ್ತು ಹಾಕಿದರು. ಈಗ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ರಾಯಭಾರಿಯಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯನವರಿಗೆ ಕಾನೂನು ಜ್ಞಾನ ಇದೆಯೇ? ಯಾರನ್ನೇ ಬಂಧಿಸುವ ಮುನ್ನ ನೋಟಿಸ್ ನೀಡುವುದು ನಿಜವಾದ ಪ್ರಕ್ರಿಯೆ. ಇದನ್ನು ಪೊಲೀಸರು ಅನುಸರಿಸಿಲ್ಲ. ದೂರಿನ ಕಾಪಿ ಕೊಡಿ ಎಂದರೆ ಪೊಲೀಸರ ಬಳಿ ಇಲ್ಲ. ಈ ಬಗ್ಗೆ ಕೇಳಿದರೆ ಮೇಲಿನಿಂದ ಸೂಚನೆ ಬಂದಿದೆ ಎನ್ನುತ್ತಾರೆ ಎಂದು ದೂರಿದರು.
ಕಳ್ಳತನ, ದರೋಡೆ ಮಾಡಿದವರನ್ನು ಪೊಲೀಸರು ಬಂಧಿಸಿಲ್ಲ. ಆದರೆ ಮನೆಮನೆಗೆ ಹೋಗಿ ಅಕ್ಷತೆ ಕೊಡುವ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜನರು ಭಕ್ತಿ ಭಾವದಿಂದ ಬಂದು ಅಕ್ಷತೆ ಸ್ವೀಕರಿಸುತ್ತಿರುವುದು ಕಾಂಗ್ರೆಸ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗ ಸುಮ್ಮನೆ ಬಿಟ್ಟರೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಾಗಿರುವುದರಿಂದ ಹೀಗೆ ಮಾಡುತ್ತಿದ್ದಾರೆ. ಆದರೆ ಹೆದರಿ ಓಡಿ ಒಂದು ಕಡೆಯಿಂದ ಇನ್ನೊಂದೆಡೆ ಹಾರಲು ನಾವು ಸಿದ್ದರಾಮಯ್ಯನವರಂತಲ್ಲ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಮೇಲೂ ಪ್ರಕರಣವಿದ್ದು, ಅವರನ್ನು ಜೈಲಿಗೆ ಹಾಕಬೇಕಿತ್ತು. ಆದರೆ ಕಾಂಗ್ರೆಸ್ನವರು ಅದರ ವಿರುದ್ಧ ಪ್ರತಿಭಟಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.