ಕನ್ನಡದ ಹೆಸರಾಂತ ಸಾಹಿತಿ ನಾ.ಡಿಸೋಜ ಇನ್ನಿಲ್ಲ 

ಕನ್ನಡದ ಹೆಸರಾಂತ ಸಾಹಿತಿ ನಾ.ಡಿಸೋಜ ಅವರು ಭಾನುವಾರದಂದು ಮಂಗಳೂರಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ  ಕೊನೆಯುಸಿರೆಳೆದಿದ್ದಾರೆ.

Written by - Manjunath N | Last Updated : Jan 5, 2025, 10:24 PM IST
  • ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.
  • ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ.
  • ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ.
ಕನ್ನಡದ ಹೆಸರಾಂತ ಸಾಹಿತಿ ನಾ.ಡಿಸೋಜ ಇನ್ನಿಲ್ಲ  title=

ಮಂಗಳೂರು: ಕನ್ನಡದ ಹೆಸರಾಂತ ಸಾಹಿತಿ ನಾ.ಡಿಸೋಜ ಅವರು ಭಾನುವಾರದಂದು ಮಂಗಳೂರಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ  ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಸೋಮವಾರ ಮಧ್ಯಾಹ್ನ ಅವರನ್ನು ಸಾಗರದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡ ಸಾಹಿತ್ಯದಲ್ಲಿ ಅವರು ಪ್ರಮುಖವಾಗಿ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ತಮ್ಮ ಹಲವಾರು ಕಥೆಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937 ಜೂನ್ 6 ರಂದು ಜನಿಸಿದರು.ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು.

ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು (ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ.ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು.

ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು. ನಾ. ಡಿಸೋಜರವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ 1995 ರಲ್ಲಿ ನಿವೃತ್ತಿ ಹೊಂದಿದರು.

ನಾ ಡಿಸೋಜ್ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.ಅದರಲ್ಲಿ ಪ್ರಮುಖವಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಪಂಪ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವರು 2014 ರಲ್ಲಿ ಕೊಡಗಿನಲ್ಲಿ ನಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಇವರ ಕಥೆಗಳಲ್ಲಿ ಕೆಲವು ಚಲನಚಿತ್ರಗಳಾಗಿ ಜನಪ್ರಿಯತೆ ಪಡೆದಿವೆ ಅದರಲ್ಲಿ ಪ್ರಮುಖವಾಗಿ ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ದ್ವೀಪ ‘, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನುರವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯತೆಯನ್ನು ಪಡೆದಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News