close

News WrapGet Handpicked Stories from our editors directly to your mailbox

ಬಿಜೆಪಿಯಲ್ಲಿ ಶುರುವಾಯಿತು 'ಸವದಿ ಮತ್ಸರ'!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ್ ಸವದಿ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಿದ ಬಳಿಕ ಬಿಜೆಪಿಯಲ್ಲಿ ಸಮಸ್ಯೆ ಸೃಷ್ಟಿಯಾಯಿತು. 

Yashaswini V Yashaswini V | Updated: Aug 26, 2019 , 02:51 PM IST
ಬಿಜೆಪಿಯಲ್ಲಿ ಶುರುವಾಯಿತು 'ಸವದಿ ಮತ್ಸರ'!

ನವದೆಹಲಿ: ಸಾಮಾನ್ಯವಾಗಿ ನಾವೆಲ್ಲರೂ ಸವತಿ ಮತ್ಸರದ ಬಗ್ಗೆ ಕೇಳಿರುತ್ತೇವೆ. ಆದರೆ ಇದ್ಯಾವುದು 'ಸವದಿ ಮತ್ಸರ' ಅಂತ ಯೋಚಿಸ್ತಿದ್ದೀರ. ತನ್ನನ್ನು ತಾನು ಶಿಸ್ತಿನ‌ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಆರಂಭವಾಗಿರುವ ಮತ್ಸರವೇ ಈ 'ಸವದಿ ಮತ್ಸರ'.

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಲಕ್ಷ್ಮಣ್ ಸವದಿ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಿರುವುದು ಬಿಜೆಪಿಯಲ್ಲಿ ಕೆಲ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದಿನ ಸರ್ಕಾರದಲ್ಲಿ 'ಬೆಳಗಾವಿಯ ಲಕ್ಷ್ಮೀ ಅವರಿಂದ ಸಮಸ್ಯೆ ಎನ್ನಲಾಗುತ್ತಿತ್ತು. ಇದೀಗ ಹೊಸ ಸರ್ಕಾರದಲ್ಲಿ ಲಕ್ಷ್ಮಣನಿಂದ ಸಮಸ್ಯೆ' ಸೃಷ್ಟಿಯಾಗಿದೆ. ವಾಸ್ತವದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 22 ದಿನ ಕಳೆದರೂ ಯಡಿಯೂರಪ್ಪ ತನ್ನ ಮಂತ್ರಿ ಮಂಡಲ ರಚಿಸಿಕೊಳ್ಳಲಾರದ ಸಮಸ್ಯೆ ಉದ್ಭವವಾಗುವುದಕ್ಕೂ ಲಕ್ಷ್ಮಣ್ ಸವದಿಯೇ ಕಾರಣ ಎಂಬ ಮಾತುಗಳೂ ಇವೆ.

ಅಷ್ಟಕ್ಕೂ ಬಿಜೆಪಿಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದಾರೆ. ಅದರಲ್ಲಿ ಕೆಲವರು ಐದು ಬಾರಿಗೂ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಆದರೆ ಅವರೆಲ್ಲರನ್ನೂ ಬಿಟ್ಟು ಚುನಾವಣೆಯಲ್ಲಿ ಸೋತಿರುವ ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿ ಸಚಿವ ಸ್ಥಾನ ನೀಡಿರುವುದರ ಹಿಂದಿನ ಉದ್ದೇಶವೇನು? ಎಂಬುದು ಕಗ್ಗಂಟಾಗಿ ಪರಿಣಮಿಸಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವಿನ ಮುನಿಸು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರೂ ದೆಹಲಿ ಮಟ್ಟದಲ್ಲಿ  ಸಂತೋಷ್ ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಬಿ.ಎಲ್. ಸಂತೋಷ್ ಪರಮಶಿಷ್ಯ ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ, ಯಡಿಯೂರಪ್ಪಗೆ ಸೋಲು. ಬಿ.ಎಲ್‌. ಸಂತೋಷ್ ದೆಹಲಿ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿಯೇ ಶಿಷ್ಯ ನಳೀನ್ ಕುಮಾರ್ ಕಟೀಲ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ದೆಹಲಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿಂತಲೂ ತಾನೇ ಪ್ರಭಾವಿ ಎಂಬ ಸಂದೇಶವನ್ನು ಸಂತೋಷ್ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂತೆಯೇ ಲಕ್ಷಣ್ ಸವದಿ ಅವರಿಗೆ ಮಂತ್ರಿಗಿರಿ ನೀಡುವುದರ ಹಿಂದೆಯೂ ಬಿ.ಎಲ್. ಸಂತೋಷ್ ಪಾತ್ರವಿದೆ ಎನ್ನಲಾಗುತ್ತಿದೆ. ಹೌದು, ಸದನದಲ್ಲಿ ನೀಲಿ ಸಿನಿಮಾ ನೋಡಿದರೂ, ಕೆಜೆಪಿ ಕಟ್ಟಿದಾಗ ಜೊತೆಯಲ್ಲಿ ಬಾರದಿದ್ದರೂ ಸವದಿ ಬಗ್ಗೆ ಯಡಿಯೂರಪ್ಪಗೆ ವಿಶೇಷ ಪ್ರೀತಿ ಇತ್ತು. ಅದೇ ಕಾರಣಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ್ ಸವದಿಗೆ ಬಿಎಸ್‌ವೈ ರಾಜ್ಯ ರೈತ ಮೋರ್ಚಾದ ಹೊಣೆಗಾರಿಕೆ ನೀಡಿದರು. ಆದರೆ ತನ್ನ ಬಗಿಲಲ್ಲೇ ಇದ್ದ ಇದೇ ಲಕ್ಷ್ಮಣ್ ಸವದಿ ಮುಂದೊಂದು ದಿನ ಮೊಗ್ಗಲ ಮುಳ್ಳಾಗಬಹುದು‌ ಎಂಬ ಅಂದಾಜು ಕೂಡ ಬಿಎಸ್‌ವೈಗೆ ಇರಲಿಲ್ಲ. 

ಇತ್ತೀಚೆಗೆ ಲಕ್ಷ್ಮಣ್ ಸವದಿ ಅವರನ್ನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ‌ ಮಾಡಲಾಗಿತ್ತು. ಇದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಹತ್ವದ ಪಾತ್ರ ವಹಿಸಿದ್ದರು. ಇದನ್ನು ಉಪೇಕ್ಷೆ ಮಾಡಿದ್ದ ಯಡಿಯೂರಪ್ಪ ಈಗ ಅದಕ್ಕಾಗಿ ಭಾರಿ ಬೆಲೆ ತೆರಬೇಕಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿಜಕ್ಕೂ ಆಘಾತವಾಗಿದ್ದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿ ಪಡೆಯಲು ಪಟ್ಟಿಯೊಂದಿಗೆ ದೆಹಲಿಗೆ ಬಂದಿಳಿದಾಗ. ಬಿಜೆಪಿ‌ ಹೈಕಮಾಂಡ್ ನಾಯಕರು 'ಸಂಪುಟ ರಚನೆ ಬಗ್ಗೆ ಬಿ.ಎಲ್. ಸಂತೋಷ್ ಅವರೊಂದಿಗೆ ಚರ್ಚಿಸಿ' ಎಂದಾಗ. ಬಿ.ಎಲ್. ಸಂತೋಷ್, ಲಕ್ಷ್ಮಣ್ ಸವದಿ ಹೆಸರನ್ನು ಪ್ರಸ್ತಾಪಿಸಿದಾಗ ಯಡಿಯೂರಪ್ಪ ಅವರದು ಬಿಸಿ ತುಪ್ಪ ಬಾಯಲ್ಲಿಟ್ಟ ಪರಿಸ್ಥಿತಿ.

ಸಂತೋಷ್ ಬಾಯಿಂದ‌ ಲಕ್ಷ್ಮಣ್ ಸವದಿ‌ ಹೆಸರನ್ನು ಕೇಳಿ ಯಡಿಯೂರಪ್ಪ ಅವರಿಗೆ ಒಂದು ರೀತಿಯ ಆಘಾತವೇ ಆಯಿತು. ಇದರಿಂದಾಗಿ ತಾವೇ ಬಿಜೆಪಿಗೆ ಕರೆ ತಂದ ಉಮೇಶ್ ಕತ್ತಿ ಅವರನ್ನು ಬಲಿ ತೆಗೆದುಕೊಳ್ಳಬೇಕಾದ ಅನಿವಾರ್ಯವೂ ಸೃಷ್ಟಿಯಾಯಿತು. ಅಷ್ಟೇ ಅಲ್ಲದೆ ಬೂದಿ ಮುಚ್ಚಿದ ಕೆಂಡದಂತಿದ್ದ ಯಡಿಯೂರಪ್ಪ-ಸಂತೋಷ್ ಸಂಬಂಧದಲ್ಲಿ 'ಸವದಿ ಮತ್ಸರ' ಪ್ರಾರಂಭವಾಯಿತು. ಇನ್ನೊಂದೆಡೆ ಲಕ್ಷ್ಮಣ್ ಸವದಿ-ಉಮೇಶ್ ಕತ್ತಿ‌ ನಡುವೆ ಅಲ್ಪ-ಸ್ವಲ್ಪ ಅಸಮಾಧಾನ ಕೂಡ 'ಸವದಿ ಮತ್ಸರ'ವಾಗಿ ಬದಲಾಯಿತು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಬರಲು ಕಾರಣಕರ್ತರಾದ ಅನರ್ಹರಿಗೂ ಪ್ರಕರಣದ ವಿಚಾರಣೆ ತಡ ಆಗುತ್ತಿರುವುದಕ್ಕೆ ಅಸಮಾಧಾನ ಇತ್ತಾದರೂ ಅದು ದೆಹಲಿಯಲ್ಲಿ ಕೂತು ಯಡಿಯೂರಪ್ಪ ಮೇಲೆ ಒತ್ತಡ ಹೇರುವ ಹಂತ ತಲುಪಿರಲಿಲ್ಲ. ಅದಕ್ಕೂ ಈ 'ಸವದಿ ಮತ್ಸರ'ವೇ ಕಾರಣ. ಮೈತ್ರಿ ಸರ್ಕಾರ ಉರುಳಲು ಮೂಲ ಕಾರಣ ಎಂದೇ ಬಿಂಬಿಸಲಾಗಿರುವ ರಮೇಶ್ ಜಾರಕಿಹೊಳಿ ಮೊದಲಿಂದಲೂ ಲಕ್ಷ್ಮಣ್ ಸವದಿಯನ್ನು ವಿರೋಧಿಸಿಕೊಂಡು ಬಂದವರು. ಅದಕ್ಕಾಗಿಯೇ ಅಥಣಿ‌ ಕ್ಷೇತ್ರದಲ್ಲಿ ಮಹೇಶ್ ಕಮ್ಟಳ್ಳಿ ಅವರನ್ನು ಗೆಲ್ಲಿಸಿದ್ದರು. 

ರಾಜೀನಾಮೆ ನೀಡುವಾಗಲೂ ಲಕ್ಷ್ಮಣ್ ಸವದಿಯಿಂದ ಮಹೇಶ್ ಕುಮ್ಟಳ್ಳಿಗೆ ತೊಂದರೆ ಆಗಬಾರದೆಂದು ಷರತ್ತು ವಿಧಿಸಿದ್ದರು. ಇದರಿಂದಾಗಿ ಲಕ್ಷ್ಮಣ್ ಸವದಿಯನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ರಮೇಶ್ ಜಾರಕಿಹೊಳಿ‌ ಆಕ್ರೋಶಗೊಂಡಿದ್ದಾರೆ.‌ ಇದರಿಂದಾಗಿ ಅನರ್ಹರನ್ನು ಎತ್ತಿಕಟ್ಟಿ ದೆಹಲಿಗೆ ದೌಡಾಯಿಸಿದರು.‌ ಅವರ ಬೆನ್ನ ಹಿಂದೆ ಯಡಿಯೂರಪ್ಪ ಕೂಡ ದೆಹಲಿಗೆ ಬರುವಂತೆ ಮಾಡಿದರು. ರಮೇಶ್ ಜಾರಕಿಹೊಳಿ ಹಾಗೂ ಸವದಿ ಮತ್ಸರ ಎಷ್ಟಿತ್ತು ಎಂಬುದಕ್ಕೆ ಅವರ 'ಅನರ್ಹ ಜೊತೆಗಾರ' ಎಚ್. ವಿಶ್ವನಾಥ್ ದೆಹಲಿ ಪತ್ರಕರ್ತರ ಮುಂದೆ 'ಈ ಸವದಿ ಈಗ ರಮೇಶ್ ಜಾರಕಿಹೊಳಿ ಕೈಗೆ ಸಿಕ್ಕಿದರೆ ಸಮಾಧಿ' ಆಗಿಬಿಡ್ತಾನೆ ಎಂದು ಹೇಳಿದ ಈ ಮಾತೇ ಸಾಕ್ಷಿ.

ಬಿಜೆಪಿಯ ಸವದಿ ಮತ್ಸರ ಮುಂದುವರೆಯುತ್ತಲೇ ಇದೆ. ಶಾಸಕರಾಗಿ ಆಯ್ಕೆ ಆಗದಿದ್ದರೂ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿರುವ ಬಿಜೆಪಿ ಸವದಿಗೆ ಉಪ ಮುಖ್ಯಮಂತ್ರಿ ಪಟ್ಟ ಕಟ್ಟಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಇದಕ್ಕೂ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಡುವಿನ ಸವದಿ ಮತ್ಸರವೇ‌‌ ಕಾರಣ ಎನ್ನಲಾಗುತ್ತಿದೆ. ತನಗೆ ಪರ್ಯಾಯವಾಗಿ ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕದ ನಾಯಕನನ್ನು ಹಾಗಾಗಿಯೇ ಯಡಿಯೂರಪ್ಪ ಕೂಡ ಇದಕ್ಕೆ ಪ್ರಬಲ ಪ್ರತಿರೋಧ ನೀಡುತ್ತಿದ್ದಾರೆ. ಆದರೆ ಬಿಜೆಪಿಯ ಈ ಸವದಿ ಮತ್ಸರದಲ್ಲಿ ಗೆಲ್ಲುವವರಾರು ಎಂಬುದನ್ನು ಕಾದುನೋಡಬೇಕಿದೆ.