ಹುಬ್ಬಳ್ಳಿ: ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯಗಳ ಸಂಕೀರ್ಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹುಬ್ಬಳ್ಳಿಯಲ್ಲಿ ಭಾನುವಾರ ಉದ್ಘಾಟಿಸಿದರು.
ನಂತರ ಉದ್ಘಾಟನಾ ಭಾಷಣ ಮಾಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ಇಲ್ಲಿ ಬಡವ-ಶ್ರೀಮಂತ, ಮೇಲು-ಕೀಳೆಂಬ ಭಾವನೆ ಇಲ್ಲ. ಇದು ಎಲ್ಲರಿಗೂ ಒಂದೇ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ ಎಂದರಲ್ಲದೆ, ನ್ಯಾಯಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಕರ್ನಾಟಕ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ನ್ಯಾಯಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡುವಲ್ಲಿ ರಾಜ್ಯ ಸರ್ಕಾರ ಉಳಿದೆಲ್ಲ ರಾಜ್ಯಗಳಿಗಿಂತ ಮುಂದೆ ಇದೆ; ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ನ್ಯಾಯಾಲಯಗಳಿಗೂ ಸ್ವಂತ ಕಟ್ಟಡ ಒದಗಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯ ಸಂಕೀರ್ಣ: Photos
ಹುಬ್ಬಳ್ಳಿಯ ಹೊಸೂರು-ಉಣಕಲ್ ರಸ್ತೆಯ ತಿಮ್ಮಸಾಗರದ 5.14 ಎಕರೆ ಬೃಹತ್ ಪ್ರದೇಶದಲ್ಲಿ, 4525 ಚದರ ಮೀಟರ್ ವಿಸ್ತೀರ್ಣದಲ್ಲಿ 122 ಕೋಟಿ ರೂ. ವೆಚ್ಚದಲ್ಲಿ ಈ ಸಂಕೀರ್ಣ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಹೈದರಾಬಾದ್'ನ ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಂಡಿದೆ. ಅತ್ಯಾಧುನಿಕ ಸೌಕರ್ಯ ಮತ್ತು ವಿನೂತನ ಮಾದರಿಯ ಈ ಬೃಹತ್ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದಲ್ಲಿಯೇ ಮೊದಲನೆಯದು ಎನ್ನಲಾಗಿದೆ.
ಏಳು ಅಂತಸ್ತುಗಳ ಈ ನ್ಯಾಯಾಲಯ ಸಂಕಿರಣದಲ್ಲಿ 20 ಕೋರ್ಟ್ ಹಾಲ್, ಸಭಾಂಗಣ, ಕಕ್ಷೀದಾರರಿಗೆ ಆಸನ ವ್ಯವಸ್ಥೆ, 140 ಶೌಚಾಲಯಗಳು, 8 ಲಿಫ್ಟ್'ಗಳು, ಸಾಕ್ಷೀದಾರರಿಗೆ ಕೊಠಡಿಗಳ ಸೌಕರ್ಯ ಇದೆ. ಇದನ್ನು ಹೊರತುಪಡಿಸಿ, ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸಂಕೀರ್ಣದ ಒಳ ಮತ್ತು ಹೊರ ಭಾಗದಲ್ಲಿ ಸಿಸಿಟಿವಿ, ಅಸೆಸ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ನ್ಯಾಯಾಧೀಶರು ಅಗತ್ಯವಿರುವ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯೂ ಇದೆ.
ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯ ಸಂಕೀರ್ಣ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮೋಹನ್ ಎಂ.ಶಾಂತನಗೌಡರ್, ಎಸ್.ಅಬ್ದುಲ್ ನಜೀರ್ ಹಾಗೂ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬೂದಿಹಾಳ, ರಾಜ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಎ ಬಿ ಬಳಿಗಾರ್ ಮತ್ತಿತರರು ಉಪಸ್ಥಿತಿತರಿದ್ದರು.
ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕಾನೂನು ಸಚಿವ ಕೃಷ್ಣ ಭೈರೇಗೌಡ ಗೈರು ಹಾಜರಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು.