ಅಡ್ವಾಣಿಯವರ ನೀಲಿಗಣ್ಣಿನ ಹುಡುಗನ ಬಗ್ಗೆ ದಿನೇಶ್ ಅಮಿನ್ ಮಟ್ಟುರವರ ನುಡಿನಮನಗಳು

ದೆಹಲಿಯ ಸಂಸತ್ತಿಗೂ ಇತ್ತ ರಾಜ್ಯದ ವಿಧಾನಸಭೆಗೂ ಸೇತುವೆಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಕನ್ನಡ ಮತ್ತು ಕರ್ನಾಟಕದ ವಿಷಯಗಳು ಬಂದಾಗ ಯಾವಾಗಲೂ ರಾಜ್ಯದ ಗಟ್ಟಿ ಧ್ವನಿಯಾಗಿದ್ದರು ಇಂತಹ ವ್ಯಕ್ತಿಯ ಜೊತೆಗಿನ ಒಡನಾಟದ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ನುಡಿನಮನ ಸಲ್ಲಿಸಿದ್ದಾರೆ.   

Last Updated : Nov 12, 2018, 12:51 PM IST
ಅಡ್ವಾಣಿಯವರ ನೀಲಿಗಣ್ಣಿನ ಹುಡುಗನ ಬಗ್ಗೆ ದಿನೇಶ್ ಅಮಿನ್ ಮಟ್ಟುರವರ ನುಡಿನಮನಗಳು  title=

ಬೆಂಗಳೂರು: ದೆಹಲಿಯ ಸಂಸತ್ತಿಗೂ ಇತ್ತ ರಾಜ್ಯದ ವಿಧಾನಸಭೆಗೂ ಸೇತುವೆಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಕನ್ನಡ ಮತ್ತು ಕರ್ನಾಟಕದ ವಿಷಯಗಳು ಬಂದಾಗ ಯಾವಾಗಲೂ ರಾಜ್ಯದ ಗಟ್ಟಿ ಧ್ವನಿಯಾಗಿದ್ದರು ಇಂತಹ ವ್ಯಕ್ತಿಯ ಜೊತೆಗಿನ ಒಡನಾಟದ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ನುಡಿನಮನ ಸಲ್ಲಿಸಿದ್ದಾರೆ.   

"ದೆಹಲಿಯಲ್ಲಿ ಕೆಲಸ‌ ಮಾಡುವ ಬೇರೆಬೇರೆ ರಾಜ್ಯಗಳಿಗೆ ಸೇರಿದ ಪತ್ರಕರ್ತರು ತಮ್ಮ ರಾಜ್ಯಗಳ ಬಗ್ಗೆ ಪಕ್ಷಪಾತಿಗಳಾಗಿರುತ್ತಾರೆ. ಅದೇ ರೀತಿ ಸಂಸದರು ಕೂಡಾ ತಮ್ಮ ರಾಜ್ಯಗಳ ಬಗ್ಗೆ ಪಕ್ಷಪಾತಿಗಳಾಗಿರುತ್ತಾರೆ. ಈ ಎರಡು ಕಡೆಗಳ'ಪಕ್ಷಪಾತಿಗಳು' ಊಟ-ತಿಂಡಿ-ತೀರ್ಥದ ನೆಪದಲ್ಲಿ ಆಗಾಗ ಒಟ್ಟಾಗುತ್ತಿರುತ್ತಾರೆ.

ಆ ರೀತಿ ಮೊದಲ‌ ಎನ್‌ಡಿಎ ಸರ್ಕಾರದ ಕಾಲದಲ್ಲಿ ಕರ್ನಾಟಕದ ಪತ್ರಕರ್ತರು ದೆಹಲಿಯಲ್ಲಿ ಆಗಾಗ ಬೈಠಕ್ ನಡೆಸುತ್ತಿದ್ದ ಮನೆಗಳಲ್ಲಿ ಸಚಿವ ಅನಂತ್‌ಕುಮಾರ್ ಮನೆಯೂ ಒಂದು.
ಅನಂತಕುಮಾರ್ ಭಯಂಕರ ಹಾಸ್ಯಪ್ರಜ್ಞೆಯ ಮನುಷ್ಯ. ಬಿಜೆಪಿ-ಆರ್ ಎಸ್ಎಸ್‌ ನಾಯಕರ ಕತೆಗಳನ್ನೆಲ್ಲ ಆಫ್ ದಿ ರೆಕಾರ್ಡ್ ಷರತ್ತು ಹಾಕಿ ಹೇಳುತ್ತಿದ್ದರು. ಜಗನ್ನಾಥ್ ರಾವ್ ಜೋಷಿಯವರ ಬಗ್ಗೆ ಅವರಿಗೆ ವಿಪರೀತ ಅಭಿಮಾನ. ಅವರ ಬಗ್ಗೆ ಗಂಟೆಗಟ್ಟಳೆ ಮಾತನಾಡುತ್ತಿದ್ದರು. 'ಅಧಿಕಾರದ ಕುರ್ಚಿ ಸಿಗಬೇಕಾದರೆ ಅದೃಷ್ಟದ ಗೆರೆಗಳು ಹಣೆಯಲ್ಲಲ್ಲ ಕೂರುವ ಮುಕುಳಿ ಮೇಲೆ ಬರೆದಿರಬೇಕು ತಮ್ಮಾ' ಎಂದು ಜೋಷಿಯವರು ಹೇಳುತ್ತಿದ್ದರಂತೆ. ನಾವೆಲ್ಲ ನಕ್ಕುನಕ್ಕು ಸುಸ್ತು.

ಬಿ.ಎಸ್.ಯಡಿಯೂರಪ್ಪನವರ ಬಗ್ಗೆ‌ ಮಾತು‌ ಬಂದಾಗ ಅಸಹಜವೆಂಬಂತೆ ಗಂಭೀರವಾಗಿರುತ್ತಿದ್ದರು. ಬಹಳ‌ಸಲ ಯಡಿಯೂರಪ್ಪನವರು ಟೀಕೆ-ಗೇಲಿ ಮಾಡಿದರೂ ಅನಂತಕುಮಾರ್ ಹಲ್ಲು ತೋರಿಸಿ ನಕ್ಕು ಸುಮ್ಮನಾಗುತ್ತಿದ್ದರು.

ವಾಜಪೇಯಿ ಕಾಲದಲ್ಲಿನ ಕಾವೇರಿ ವಿವಾದ ಭುಗಿಲೆದ್ದಾಗ‌ ಕರ್ನಾಟಕದ ಪರವಾಗಿ ಅನಂತಕುಮಾರ್, ದೇವೇಗೌಡರ ಜತೆ ಸೇರಿಕೊಂಡು ತೆರೆಯಮರೆಯಲ್ಲಿ‌ ಕೆಲಸ ಮಾಡಿದ್ದರು. ಆ ಕಾಲದಲ್ಲಿ‌ ಅವರು ನಮಗೆಲ್ಲ‌ ಒಳ್ಳೆಯ ಸುದ್ದಿಮೂಲ.
ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಫಲಾನುಭವಿ ಅನಂತಕುಮಾರ್ ರಾಜ್ಯದಲ್ಲಿದ್ದ ಪಕ್ಷದ ಹಿರಿ-ಕಿರಿಯರನ್ನೆಲ್ಲ ಪಕ್ಕಕ್ಕೆ ಸರಿಸಿ ಅಧಿಕಾರದ ಏಣಿಯಲ್ಲಿ‌ ಸರ್ರನೆ ಮೇಲೇರಿದವರು. ಆ ಕಾಲದಲ್ಲಿ‌ ಅಡ್ವಾಣಿಯವರ ಕಣ್ಣಿಗೆ ಬಿದ್ದಿದ್ದ
ಅನಂತಕುಮಾರ್, ಅವರ ನೀಲಿಕಣ್ಣಿನ ಹುಡುಗ ಎಂದೇ ಜನಪ್ರಿಯರಾಗಿದ್ದರು. ರಾಜಕೀಯ‌ವಾಗಿ ಅನಂತಕುಮಾರ್ ಬೆಳವಣಿಗೆಯಲ್ಲಿ‌ ಅಡ್ವಾಣಿ ಆಶೀರ್ವಾದದ ಪಾಲು‌ ದೊಡ್ಡದು ಬಹುಷ: ಇದೇ ಕಾರಣಕ್ಕೆ ಮೋದಿ ಕಾಲದ ಪ್ರಾರಂಭದ‌ ದಿನಗಳಲ್ಲಿ ನಿರ್ಲಕ್ಷ್ಯಕೀಡಾದರು. ತಕ್ಷಣ ಸುಧಾರಿಸಿಕೊಂಡು ಗುರುನಿಷ್ಠೆಯಿಂದ ಅಂತರ ಕಾಯ್ದುಕೊಂಡು ಚಾಣಾಕ್ಷತನದಿಂದ ಮೋದಿ-ಶಾ ಸಂಬಂಧವನ್ನೂ ಸರಿಪಡಿಸಿಕೊಂಡರು. ರಾಜಕೀಯವಾಗಿ ಮಹತ್ವಾಕಾಂಕ್ಷಿಯಾಗಿದ್ದ ಅನಂತಕುಮಾರ್ ಅವರಿಗೆ ರಾಜ್ಯದ‌ ಮುಖ್ಯಮಂತ್ರಿಯಾಗುವ ಆಸೆ ಮಾತ್ರವಲ್ಲ ವಿಶ್ವಾಸವೂ ಇತ್ತು. ಯಾರಿಗೆ ಗೊತ್ತು? ಆಗುತ್ತಿದ್ದರೋ ಏನೋ? ಇನ್ನೆಲ್ಲಿ?
ಸಾಮಾನ್ಯವಾಗಿ‌ ಸಂಪುಟ ಸಭೆಯಲ್ಲಿ‌‌ ಇಂಗ್ಲೀಷ್ ಅಕ್ಷರಗಳಿಗೆ‌‌ ಅನುಗುಣವಾಗಿ‌ ಸಚಿವರು ಕೂರುತ್ತಾರೆ.‌(ಈಗ ಗೊತ್ತಿಲ್ಲ). ಈ ಕಾರಣದಿಂದಾಗಿ
A ಯಿಂದ ಪ್ರಾರಂಭವಾಗುವ ತಮ್ಮ‌ ಹೆಸರಿನಿಂದಾಗಿ ಸಂಪುಟ ಸಭೆಯಲ್ಲಿ‌ Atal,Adwani ನಂತರ ಅವರಿಗೆ ಕೂರುವ ಅವಕಾಶ ಇತ್ತು. ಅವರು ಸಂಪುಟ ಸಚಿವರಾಗಿದ್ದಾಗ ಪತ್ರಿಕೆಗೆ ಬಿಡುಗಡೆ‌ ಮಾಡಿದ್ದ ಮೊದಲ ಸರ್ಕಾರಿ‌ ಪ್ರಕಟಣೆಯಲ್ಲಿ‌ಯೂ ಅವರ ಹೆಸರು‌‌‌ ಅನುಕ್ರಮವಾಗಿ ಹೀಗೆಯೇ ಇತ್ತು.‌

"ಈ ವಿಷಯ ಗೊತ್ತಿಲ್ಲದ ಜನ ಅಟಲ್,ಅಡ್ವಾಣಿ ನಂತರದ ಪವರ್‌ಪುಲ್ ಮನುಷ್ಯ ನಾನೇ ಎಂದು ಹೇಳುತ್ತಿದ್ದಾರೆ‌ ಗೊತ್ತಾ , ಹೆಸರಿನಲ್ಲಿಯೂ ನಾನು ಎಷ್ಟೊಂದು ಅದೃಷ್ಟಶಾಲಿ" ಎಂದು‌ ಒಮ್ಮೆ ಹೇಳಿ‌ ನಕ್ಕಿದ್ದು ನೆನಪಾಗುತ್ತಿದೆ. ಈ ಅದೃಷ್ಟ‌ ಸಾವಿನ ವಿರುದ್ಧದ ಹೋರಾಟದಲ್ಲಿ ಮಾತ್ರ ಅವರ ನೆರವಿಗೆ ಬರಲಿಲ್ಲ. Miss you.

Trending News