ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹಾಡಿ, ಹೊಗಳಿ ಈಗ ತೆಗಳುವುದು ಸ್ವಾರ್ಥ ರಾಜಕಾರಣವಲ್ಲದೆ ಮತ್ತೇನು?: ಸಿದ್ದರಾಮಯ್ಯ

ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Last Updated : Nov 10, 2018, 11:16 AM IST
ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹಾಡಿ, ಹೊಗಳಿ ಈಗ ತೆಗಳುವುದು ಸ್ವಾರ್ಥ ರಾಜಕಾರಣವಲ್ಲದೆ ಮತ್ತೇನು?: ಸಿದ್ದರಾಮಯ್ಯ title=

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ರಾಜಕೀಯ ಬಣ್ಣ ಬಳಿಯುತ್ತಿರುವ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಟಿಪ್ಪು ಜಯಂತಿಗೆ ಟ್ವಿಟ್ಟರ್ ಮೂಲಕ ರಾಜ್ಯದ ಜನತೆಗೆ ಶುಭ ಕೋರಿರುವ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟಿಪ್ಪು ಬಗ್ಗೆ ವಿವರಣೆ ನೀಡುತ್ತಾ, 
ಮಹಾಪುರುಷ-ಮಹಿಳೆಯರ ಜಯಂತಿ ಆಚರಣೆಯ ಸಂಪ್ರದಾಯವನ್ನು ಹಿಂದಿನ ನಮ್ಮ ಸರ್ಕಾರ ಹುಟ್ಟುಹಾಕಿದ್ದಲ್ಲ, ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಜಯಂತಿ ಆಚರಣೆ ಪಟ್ಟಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುತ್ತಾ ಬಂದಿವೆ. ಆಗ ಕಾಣಿಸಿಕೊಳ್ಳದ ಪ್ರತಿರೋಧ ಟಿಪ್ಪು ಆಚರಣೆ ಬಗ್ಗೆ ಮಾತ್ರ ಯಾಕೆ? ತಾವು ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ, ಟಿಪ್ಪುವನ್ನು ಹಾಡಿ-ಹೊಗಳಿ, ಪುಸ್ತಕ ಬರೆಸಿ ಈಗ ವಿರೋಧಿಸುತ್ತಿರುವುದು ಸ್ವಾರ್ಥರಾಜಕಾರಣವಲ್ಲದೆ ಮತ್ತೇನು? ಎಂದು ಯಡಿಯೂರಪ್ಪ, ಶ್ರೀರಾಮುಲು, ಜಗದೀಶ ಶೆಟ್ಟರ್ ಮೊದಲಾದವರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿ ಟಿಪ್ಪು ಪೇಟ, ಕತ್ತಿ ಹಿಡಿದಿರುವ ಫೋಟೊ ಟ್ವೀಟ್ ಮಾಡುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ? ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ. ಇದಕ್ಕಾಗಿ ಬಿಜೆಪಿ ಸರ್ಕಾರವೇ ಪ್ರಕಟಿಸಿದ ಪುಸ್ತಕ ಓದಬೇಕಾಗುತ್ತದೆ ಎನ್ನುವ ಮೂಲಕ, ಆ ಪುಸ್ತಕದ ಫೋಟೊ ಮತ್ತು ಆ ಪುಸ್ತಕ ಪ್ರಕಟಣೆಗೆ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿನಂದನಾ ಪತ್ರವನ್ನೂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ ಲೂಟಿ ಮಾಡಿದ್ದ ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ, ಟಿಪ್ಪು ಪ್ರಜಾತಾಂತ್ರಿಕವಾಗಿ ಆಯ್ಕೆಯಾದವನ್ನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ದಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ. ಟಿಪ್ಪು ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ವೈರಿಗಳಾಗಿದ್ದ ಬ್ರಿಟಿಷ್ ಇತಿಹಾಸಕಾರರಿಂದಲ್ಲ. ಟಿಪ್ಪು ಬಗ್ಗೆ ಮೈಸೂರು ಭಾಗದಲ್ಲಿ ಲಾವಣಿಗಳಿವೆ. ಅವುಗಳಲ್ಲಿ ಟಿಪ್ಪುವಿನ ದೇಶಪ್ರೇಮ, ಜಾತ್ಯತೀತ ಧೋರಣೆ, ಅಭಿವೃದ್ದಿಯ ಕಲ್ಪನೆಗಳ ಮಾಹಿತಿ ಇದೆ. ಈ ಲಾವಣಿ, ಪದ, ಹಾಡುಗಳೇ ನಿಜವಾದ ಇತಿಹಾಸ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರ್ಕಾರವೇ ಜಯಂತಿಗಳನ್ನು ಆಚರಿಸುವುದಕ್ಕೆ ಕಾರಣವಿದೆ. ಇದನ್ನು ಸಾರ್ವಜನಿಕರಿಗೆ ಬಿಟ್ಟರೆ ತಮ್ಮ ಜಾತಿ-ಧರ್ಮಗಳಿಗೆ ಸೇರಿರುವ ಮಹಾಪುರುಷ-ಮಹಿಳೆಯರ ಜಯಂತಿ ಆಚರಣೆಯನ್ನಷ್ಟೇ ಮಾಡಿ ಅವರನ್ನು ತಮ್ಮ ಜಾತಿ-ಧರ್ಮಗಳಿಗೆ ಸೀಮಿತಗೊಳಿಸುತ್ತಾರೆ. ಇದು ಮಹಾನ್ ವ್ಯಕ್ತಿಗಳಿಗೆ ಅಗೌರವವೂ ಹೌದು. ಹಾಗಾಗಿ ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ. ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Trending News