ಹೆಸರುಕಾಳು ಖರೀದಿ ಕೇಂದ್ರ ಆರಂಭಿಸಲು ಸಿದ್ದರಾಮಯ್ಯ ಒತ್ತಾಯ

ರಾಜ್ಯದಲ್ಲಿ ಮುಂಗಾರಿನ ಮಳೆಗಳು ಚೆನ್ನಾಗಿದ್ದರಿಂದ ಹೆಸರು, ಉದ್ದು ಮುಂತಾದ ದ್ವಿದಳ ಧಾನ್ಯಗಳ ಬೆಳೆ ಉತ್ತಮವಾಗಿದೆ. 

Last Updated : Sep 8, 2020, 02:38 PM IST
  • ಹೆಸರು ಮತ್ತು ಉದ್ದು ಬೆಳೆಯನ್ನು ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.
  • ಪ್ರಸ್ತುತ ವಿವಿಧ ಎ.ಪಿ.ಎಂ.ಸಿ.ಗಳಲ್ಲಿ ಹೆಸರು ಕಾಳು ಕ್ವಿಂಟಾಲ್‍ಗೆ 2,105 ರೂಪಾಯಿಗಳಿಗೂ ಮಾರಾಟವಾಗುತ್ತಿದೆ.
  • ಎಲ್ಲಾ ಮಾರುಕಟ್ಟೆಗಳ ಇಂದಿನ ಸರಾಸರಿ ಬೆಲೆ 5,000 ರೂಪಾಯಿಗಳ ಆಸುಪಾಸಿನಲ್ಲಿದೆ.
ಹೆಸರುಕಾಳು ಖರೀದಿ ಕೇಂದ್ರ ಆರಂಭಿಸಲು ಸಿದ್ದರಾಮಯ್ಯ ಒತ್ತಾಯ title=

ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ 7,196 ರೂಪಾಯಿಗಳನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗಧಿಪಡಿಸಿರುವುದರಿಂದ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಮುಂಗಾರಿನ ಮಳೆಗಳು ಚೆನ್ನಾಗಿದ್ದರಿಂದ ಹೆಸರು, ಉದ್ದು ಮುಂತಾದ ದ್ವಿದಳ ಧಾನ್ಯಗಳ ಬೆಳೆ ಉತ್ತಮವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊಯಿಲು ನಡೆಯುತ್ತಿದೆ. ರೈತರ ಶ್ರಮಕ್ಕೆ ಈ ಬೆಲೆ ಕಡಿಮೆಯೆ. ಆದರೆ ಅಷ್ಟಾದರೂ ಸಿಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಹೆಸರು ಮತ್ತು ಉದ್ದು ಬೆಳೆಯನ್ನು ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸ್ತುತ ವಿವಿಧ ಎ.ಪಿ.ಎಂ.ಸಿ.ಗಳಲ್ಲಿ ಹೆಸರು ಕಾಳು ಕ್ವಿಂಟಾಲ್‍ಗೆ 2,105 ರೂಪಾಯಿಗಳಿಗೂ ಮಾರಾಟವಾಗುತ್ತಿದೆ. ಎಲ್ಲಾ ಮಾರುಕಟ್ಟೆಗಳ ಇಂದಿನ ಸರಾಸರಿ ಬೆಲೆ 5,000 ರೂಪಾಯಿಗಳ ಆಸುಪಾಸಿನಲ್ಲಿದೆ. 

ಹೆಸರನ್ನು ಕೊಯಿಲು ಮಾಡಿ ಬಹಳ ದಿನಗಳ ಕಾಲ ರೈತರು (Farmers) ಮನೆಗಳಲ್ಲಿ ದಾಸ್ತಾನು ಮಾಡಲಾಗುವುದಿಲ್ಲ. ಹುಳದ ಕಾಟ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ರೈತರು ಅಡ್ಡಾದಿಡ್ಡಿ ಬೆಲೆಗಳಿಗೆ ಮಾರಿಕೊಳ್ಳುತ್ತಿದ್ದಾರೆ. 

ಸರ್ಕಾರ ಈವರೆಗೂ ಸಹ ಖರೀದಿ ಕೇಂದ್ರಗಳನ್ನು ತೆರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದು ರೈತ ವಿರೋಧಿ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಕಾಯ್ದೆಯನ್ನು ತಿದ್ದುಪಡಿ ಮಾಡಿ ಎ.ಪಿ.ಎಂ.ಸಿ.ಗಳನ್ನೇ ಬರ್ಖಾಸ್ತು ಮಾಡಲು ಹೊರಟಿದೆ. ಕಳೆದ ಬಾರಿ ಸಹ ತೊಗರಿ ಖರೀದಿಯಲ್ಲೂ ಸರ್ಕಾರ ರೈತರಿಗೆ ಮೋಸ ಮಾಡಿತು. 

ಕೇಂದ್ರ ರಾಜ್ಯ ಎರಡೂ ಕಡೆ ಒಂದೇ ಪಕ್ಷದ ಆಡಳಿತವಿದೆ. ರಾಜ್ಯದ ಜನರು 25 ಜನ ಬಿ.ಜೆ.ಪಿ. ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಒಬ್ಬರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಸರ್ಕಾರ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಹೆಸರು ಕಾಳನ್ನು ನಿಗಧಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಖರೀದಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Trending News