ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಆರ್. ರಮೇಶ್ ಕುಮಾರ್

ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ- ಕೆ.ಆರ್. ರಮೇಶ್ ಕುಮಾರ್  

Last Updated : Jul 29, 2019, 01:12 PM IST
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಆರ್. ರಮೇಶ್ ಕುಮಾರ್ title=
Pic Courtesy: ANI

ಬೆಂಗಳೂರು: 14 ತಿಂಗಳುಗಳಿಂದ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಕೆ.ಆರ್. ರಮೇಶ್ ಕುಮಾರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು.

ವಿಧಾನಸಭೆ ಕಲಾಪದಲ್ಲಿಂದು ತಮ್ಮ ರಾಜೀನಾಮೆ ಘೋಷಿಸಿದ ಕೆ.ಆರ್. ರಮೇಶ್ ಕುಮಾರ್, 2018 ರ ಚುನಾವಣೆ ಫಲಿತಾಂಶದ ನಂತರ ನನಗೆ ಸ್ಪೀಕರ್ ಸ್ಥಾನ ವಹಿಸಿಕೊಳ್ಳುವಂತೆ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಸೂಚಿಸಿದ್ದರು. ಸಿದ್ದರಾಮಯ್ಯ ಅವರೂ ಸಹ ನಾನೇ ಈ ಸ್ಥಾನ ಅಲಂಕರಿಸಬೇಕು ಎಂದು ಮನವಿ ಮಾಡಿದ್ದರು. ಆಡಳಿತ ಪಕ್ಷದ ಎಲ್ಲಾ ಸದಸ್ಯರೂ ನನ್ನನ್ನು ವಿಧಾನಸಭಾಧ್ಯಕ್ಷನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದರು. ನಾನು ಕಳೆದ 14 ತಿಂಗಳಿನಿಂದ ಈ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ. ಈ ಸಂದರ್ಭದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು. 

ರಾಜೀನಾಮೆ ಘೋಷಣೆಗೂ ಮೊದಲು ಕಲಾಪವನ್ನುದ್ದೇಶಿಸಿ ಮಾತನಾಡಿದ ಕೆ.ಆರ್. ರಮೇಶ್ ಕುಮಾರ್, ಕಳೆದ 14 ತಿಂಗಳುಗಳ ಕಾಲ ನಾನು ಈ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ರಾಜಕಾರಣದಲ್ಲಿ ಕೆಲ ಘಟನೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ವಿವೇಚನೆಯಿಂದ ಕೆಲಸ ಮಾಡಬೇಕು. ನಮ್ಮ ಸ್ಥಾನಕ್ಕೆ ಅಪಚಾರ ಮಾಡದಂತೆ ಕೆಲಸ ಮಾಡಬೇಕು. ನನ್ನ ಅಧಿಕಾರವಧಿಯಲ್ಲಿ ಜವಾಬ್ದಾರಿಯುತವಾಗಿ, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ನನ್ನ ಕೆಲಸದ ವೇಳೆ ಯಾರ ಒತ್ತಡಕ್ಕೂ ನಾನು ಮಣಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ದೇಶದಲ್ಲಿ ಭ್ರಷ್ಟಾಚಾರದ ಮೂಲ ಚುನಾವಣೆಗಳು:
ಈ ವೇಳೆ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿದ ರಮೇಶ್ ಕುಮಾರ್, ಈ ದೇಶದಲ್ಲಿ ಚುನಾವಣೆಗಳು ಭ್ರಷ್ಟಾಚಾರದ ಮೂಲ ಎಂದು ತಿಳಿಸಿದರು. ಮಾತ್ರವಲ್ಲದೆ,  ಚುನಾವಣೆಗಳು ಸುಧಾರಣೆಯಾಗದಿದ್ದರೆ, ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ. ಲೋಕಾಯುಕ್ತ ಕಾನೂನು ಸಹ ಸುಧಾರಣೆಯಾಗಬೇಕು. ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಕಡ್ಡಾಯ ಸಲ್ಲಿಸಬೇಕು. ಜನರಪ್ರತಿನಿಧಿಗಳು ಆಸ್ತಿವಿವರ ಸಲ್ಲಿಸದಿದ್ದರೆ ಏನು ಮಾಡಬೇಕು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಧನವಿನಿಯೋಗ ಮಸೂದೆಗೆ ಒಪ್ಪಿಗೆ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ಧನವಿನಿಯೋಗ ಮಸೂದೆಗೆ ಅನುಮೋದನೆ ದೊರೆಗೆ ಬಳಿಕ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿಕೆ ನೀಡಿದ್ದರು.

Trending News