ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಯುಟರ್ನ್ ಹೊಡೆದ ಶ್ರೀರಾಮುಲು

    

Last Updated : Jul 28, 2018, 10:49 AM IST
ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಯುಟರ್ನ್ ಹೊಡೆದ ಶ್ರೀರಾಮುಲು  title=
Photo courtesy: Facebook

ಬಳ್ಳಾರಿ:  ಪ್ರತ್ಯೇಕ  ಉತ್ತರ ಕರ್ನಾಟಕಕ್ಕೇ ತಮ್ಮ ಸಂಪೂರ್ಣ ಬೆಂಬಲವಿದ್ದು ಹೋರಾಟದ ನೇತೃತ್ವ ವಹಿಸಿಕೊಳ್ಳಲು ತಾವು ಸಿದ್ದ ಎಂದು ಹೇಳಿದ್ದ ಶ್ರೀರಾಮುಲು ಈಗ ಈ ವಿಚಾರದಲ್ಲಿ ಯುಟರ್ನ್ ಹೊಡೆದಿದ್ದಾರೆ.

ಈ ಕುರಿತಾಗಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು "ಸಮ್ಮಿಶ್ರ ಸರಕಾರದ ಮಲತಾಯಿ ಧೋರಣೆಯಿಂದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಶುರುವಾಗಿದ್ದು, ಇದೊಂದು ದುರದೃಷ್ಟಕರ ಸಂಗತಿ.ಬಳ್ಳಾರಿ ಜಿಲ್ಲೆಯ ಕೋ.ಚೆನ್ನಬಸಪ್ಪ, ಹರಗಿನಡೋಣಿ ಸಣ್ಣ ಬಸವನಗೌಡರು, ರಂಜಾನ್ ಸಾಬ್ ಮುಂತಾದವರ ತ್ಯಾಗದಿಂದ ಕರ್ನಾಟಕ ಏಕೀಕರಣಗೊಂಡಿದೆ.

ಅದೇ ಜಿಲ್ಲೆಯವನಾದ ನಾನು ಪ್ರತ್ಯೇಕತೆಯ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು.ಕರ್ನಾಟಕದ ಅಖಂಡತೆಯಲ್ಲಿ ನನಗೆ ಅಪಾರ ಗೌರವವಿದೆ. ಉತ್ತರ-ದಕ್ಷಿಣವೆಂಬ ಭೇದವಿಲ್ಲದೇ ಸಮಾನವಾಗಿ ಕಾಣಬೇಕೆಂದು ಬಯಸುತ್ತೇನೆ. ಸಮ್ಮಿಶ್ರ ಸರಕಾರವು ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡುವ ಮೂಲಕ ಕರ್ನಾಟಕದ ಏಕೀಕರಣವನ್ನು ಗೌರವಿಸಲಿ."ಎಂದು ಬರೆದಿದ್ದಾರೆ.

ಇದಕ್ಕೂ ಮೊದಲು ಅವರು  ಕುಮಾರಸ್ವಾಮಿಯವರ ಮೇಲೆ ಕಿಡಿಕಾರುತ್ತಾ "ಅಖಂಡ ಕರ್ನಾಟಕವೇ ನಮ್ಮ ಆಶಯ ಕೂಡ. ರಾಜ್ಯ ವಿಭಜನೆ ಮಾಡುವ ಯಾವುದೇ ದುರುದ್ದೇಶ ನಮಗಿಲ್ಲ. ಆದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಭಾಗದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ನೀತಿಯಿಂದಾಗಿ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ಹೋರಾಟದ ನೇತೃತ್ವ ನಾನೇ ವಹಿಸುತ್ತೇನೆ ಎಂದು ಶ್ರೀರಾಮುಲು ಹೇಳಿದ್ದರು.
 

Trending News