ನ್ಯಾಯಮೂರ್ತಿಗಳ ನೇಮಕಕ್ಕೆ ನ್ಯಾಯಾಲಯಗಳು ಶಿಫಾರಸ್ಸು ಮಾಡಲಾಗದು-ಹೈಕೋರ್ಟ್

                  

Last Updated : Nov 11, 2017, 08:49 AM IST
ನ್ಯಾಯಮೂರ್ತಿಗಳ ನೇಮಕಕ್ಕೆ ನ್ಯಾಯಾಲಯಗಳು ಶಿಫಾರಸ್ಸು ಮಾಡಲಾಗದು-ಹೈಕೋರ್ಟ್ title=

ಬೆಂಗಳೂರು: ರಾಜ್ಯ ಹೈಕೋರ್ಟ್ನಲ್ಲಿ ಖಾಲಿಯಿರುವ 37 ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿಗೆ ಆದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ  ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ವಿಭಾಗೀಯ ಪೀಠವು  ನ್ಯಾಯಮೂರ್ತಿಗಳ ನೇಮಕಕ್ಕೆ ನ್ಯಾಯಾಲಯಗಳು ಶಿಫಾರಸ್ಸು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ, ನ್ಯಾಯಮೂರ್ತಿ ಹುದ್ದೆಯು ಸಾಂವಿಧಾನಿಕವಾದದ್ದು. ಅದನ್ನು ಖಾಲಿ ಉಳಿಸುವುದು ಸಂವಿಧಾನ ಬಾಹಿರ. ನ್ಯಾಯಮೂರ್ತಿಗಳ ಕೊರತೆಯಿಂದ ನ್ಯಾಯಾಂಗ ಸುಲಲಿತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಇದರಿಂದ ಕೇವಲ ಕಕ್ಷಿದಾರಿಗೆ ನಷ್ಟವಾಗುವುದು ಮಾತ್ರವಲ್ಲದೆ, ಸರ್ಕಾರದ ಆಡಳಿತ ಯಂತ್ರ ಕುಸಿಯುವ ಸಾಧ್ಯತೆಯಿದೆ. ನ್ಯಾಯಾಯಮೂರ್ತಿಗಳನ್ನು ನೇಮಕ ಮಾಡುವುದು ನ್ಯಾಯಾಂಗದ ಜವಾಬ್ದಾರಿ ಎಂದು ತಮ್ಮ ವಾದ ಮಂಡಿಸಿದರು.

ವಾದವನ್ನು ಆಲಿಸಿದ ನ್ಯಾಯಮೂರ್ತಿ ರವಿ ಮಳೀಮಠ ಪ್ರತಿಕ್ರಿಯಿಸಿ, ನ್ಯಾಯಮೂರ್ತಿಗಳ ನೇಮಕಾತಿ ಕೊಲಿಜಿಯಂ ತೀರ್ಮಾನಕ್ಕೆ ಬಿಟ್ಟ ವಿಷಯ ಮತ್ತು ಅದು ಸುಪ್ರೀಂ ಕೋರ್ಟ್ ಆಡಳಿತದ ಭಾಗವಾಗಿರುತ್ತದೆ. ರಾಜ್ಯ ಹೈಕೋರ್ಟ್ ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಹೇಗೆ ನಿರ್ದೇಶಿಸಲು ಸಾಧ್ಯವೆಂದು ಪ್ರಶ್ನಿಸಿದರು.

ಅಲ್ಲದೆ, ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ಅಗತ್ಯವಿದೆ ಎಂಬುದರ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ, ನಿಮ್ಮ ಮನವಿಯೂ ಸರಿಯಿದೆ. ಸುಪ್ರೀಂಕೋರ್ಟ್ ನ್ಯಾಯಾಂಗ ನೇಮಕಾತಿಯ ಕುರಿತು ಬುಧವಾರವಷ್ಟೇ ತೀರ್ಪು ನೀಡಿದೆ. ಅದರಂತೆ ನ್ಯಾಯಮೂರ್ತಿಗಳ ನೇಮಕಕ್ಕೆ ನ್ಯಾಯಾಲಯಗಳು ಶಿಫಾರಸ್ಸು ಮಾಡಲಾಗದು. ಹೀಗಿರುವಾಗ ಈ ನ್ಯಾಯಾಲಯವು ಯಾರಿಗೆ ನೋಟಿಸ್ ನೀಡಬೇಕು, ಪ್ರಕರಣದಲ್ಲಿ ನಾವು ಹೇಗೆ ಮಧ್ಯ ಪ್ರವೇಶಿಸಲು ಸಾಧ್ಯ ಎಂದೂ ಸಹ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ನೋಟಿಸ್ ನೀಡದಿದ್ದರೂ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸಬಹುದು ಎನ್ನುವುದರ ಮೂಲಕ ಗಮನ ಸೆಳೆದರು. ಇದನ್ನು ಒಪ್ಪದ ನ್ಯಾಯಪೀಠ, ನೋಟಿಸ್ ಜಾರಿಗೊಳಿಸುವುದು ಅಥವಾ ಮೇಲ್ವಿಚಾರಣೆ ನಡೆಸುವುದು ಎರಡೂ ಒಂದೇ ಎಂದು ತಿಳಿಸಿತು. 

ನಂತರ ಬಿ.ವಿ.ಆಚಾರ್ಯ ಸುಪ್ರೀಂ ಕೋರ್ಟ್ ತೀರ್ಪನ್ನು ಅಧ್ಯಯನ ಮಾಡಿ ನಂತರ ತಮ್ಮ ವಾದ ಮುಂದುವರಿಸಲು ತಮಗೆ ಕಾಲಾವಕಾಶ ನೀಡಬೇಕೆಂದು ಕೋರಿದ ಮನವಿಯನ್ನು ಒಪ್ಪಿದ ವಿಭಾಗೀಯ ಪೀಠವು ನವೆಂಬರ್ 15ಕ್ಕೆ ವಿಚಾರಣೆ ಮುಂದೂಡಿತು.

Trending News