ಬೆಂಗಳೂರು: ರಾಜ್ಯದಲ್ಲಿ COVID- 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯದಿನವನ್ನು ಸರಳವಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಜೊತೆಗೆ ಸ್ವತಂತ್ರ್ಯ ದಿನಾಚರಣೆಗೆ (Independence Day) ಬಿಡುಗಡೆ ಮಾಡಲಾಗುತ್ತಿದ್ದ ಅನುದಾನವನ್ನೂ ಕಡಿತಗೊಳಿಸಿದೆ.
ಯಾವ ರೀತಿ ಸ್ವಾತಂತ್ರ್ಯ ದಿನಾಚರಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬುದನ್ನು ತಿಳಿಸಲಾಗಿದೆ.
ಕೋವಿಡ್ -19 (Covid-19) ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಕಡಿಮೆ ಜನರನ್ನು ಆಹ್ವಾನಿಸಬೇಕು. ಕೇವಲ 500 ಅಹ್ವಾನ ಪತ್ರಿಕೆಗಳನ್ನು ಮಾತ್ರ ಮುದ್ರಿಸಬೇಕು ಎಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ಧಾರಾಕಾರ ಮಳೆ, ರೆಡ್ ಅಲರ್ಟ್: ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಸಿಎಂ ಸೂಚನೆ
ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ಮಾಣಿಕ್ ಶಾ ಪರೆಡ್ ಮೈದಾನದಲ್ಲಿ ನಡೆಯುತ್ತಿದ್ದ ಸ್ವತಂತ್ರ್ಯ ದಿನಾಚರಣೆಗೆ ರಾಜ್ಯ ಸರ್ಕಾರ ಕಳೆದ ವರ್ಷ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಆದರೆ COVID- 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಣೆ ಮಾಡುವಂತೆ ಸೂಚಿಸಿದ್ದು ಕೇವಲ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೂಚಿಸಿದ್ದಾರೆ.
ಮಾರ್ಗಸೂಚಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಧಿಕಾರಿಗಳ ಕುಟುಂಬ ಸದಸ್ಯರನ್ನು ನಿಷೇಧಿಸಲಾಗಿದೆ. 50 ಜನ COVID- 19 ವಾರಿಯರ್ಸ್ ಭಾಗವಹಿಸಲು ಅವಕಾಶ ನೀಡಲಾಗಿದೆ. ಹಾಗೂ COVID- 19 ವೈರಸ್ ನಿಂದ ಗುಣಮುಖರಾದರ ಪೈಕಿ 25 ಜನರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲು ಸೂಚಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
Good News! ಕರೋನಾ ಲಸಿಕೆ ಮೊದಲ ಹಂತದಲ್ಲಿ ಯಶಸ್ವಿ, ನಾಳೆಯಿಂದ ಎರಡನೇ ಹಂತದ ಪ್ರಯೋಗ
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ ಪಥಸಂಚಲನವು ಕೂಡ ಕಡಿಮೆ ಇರಲಿದೆ. ಪ್ರತಿವರ್ಷ 36 ತುಕಡಿಗಳು ಕವಾಯತ್‌ನಲ್ಲಿ ಭಾಗವಹಿಸುತ್ತಿದ್ದವು. ಈ ಬಾರಿ 4 ರಿಂದ 16 ತುಕಡಿಗಳನ್ನು ಮಾತ್ರ ನಿಯೋಜಿಸಲು ಸೂಚಿಸಲಾಗಿದೆ. ಇದೂ ಅಲ್ಲದೆ ಪ್ರತಿ ತುಕಡಿಯಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಬೇಕು. ಪಂಥ ಸಂಚಲನದಲ್ಲಿ ಭಾಗಿವಹಿಸುವವರು ಒಂದು ದಿನ ಮುಂಚಿತವಾಗಿ COVID- 19 ಪರೀಕ್ಷೆ ಮಾಡಿಸಬೇಕು. ಪೆರೇಡ್ ನಲ್ಲಿ ಸೌಟ್ ಮತ್ತು ಎನ್‌ಸಿಸಿ ತುಕಡಿಗಳು ಇರಬೇಕಿಲ್ಲ. ಈ ಬಾರಿ ಶಾಲಾ / ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುವುದಿಲ್ಲ. ಸಾರ್ವಜನಿಕರು ಹಾಗೂ ಮಕ್ಕಳಿಗೆ ನಿಷೇಧ ಮಾಡಬೇಕು. ಕಾರ್ಯಕ್ರಮವನ್ನು ದೂರದರ್ಶನ ಮತ್ತು ವೆಬ್ ಕಾಸ್ಟ್ ಮೂಲಕ ನೇರ ಪ್ರಸಾರ ಮಾಡಬೇಕು ಎಂದು ತಿಳಿಸಲಾಗಿದೆ.
ಮಾಣಿಕ್ ಶಾ ಪರೆಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ಮುನ್ನ ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರಿನಿಂಗ್ ಟೆಸ್ಟ್ ಮಾಡಬೇಕು. ಧ್ವಜಾರೋಹಣ ನಡೆಯುವ ಸ್ಥಳದಲ್ಲಿ ಅಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನ ನಿಯೋಜಿಸಬೇಕು. ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ ನಾಡ ಗೀತೆ ಹಾಗೂ ರೈತ ಗೀತೆಗಳು ಮಾತ್ರ ಇರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಇರಬಾರದು. ಮಳೆಯಿಂದ ಕಾರ್ಯಕ್ರಮ ಅಡ್ಡಿಯಾಗದಂತೆ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ.