ಡಿಕೆಶಿ-ನನ್ನ ನಡುವೆ ಭಿನ್ನ ಅಭಿಪ್ರಾಯವಿರಬಹುದು, ಭಿನ್ನಾಭಿಪ್ರಾಯವಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪನವರ ನೂರು ದಿನಗಳ ಸಾಧನೆ. ಒಂದು ದೊಡ್ಡ ಸೊನ್ನೆ- ಮಾಜಿ ಸಿಎಂ ಸಿದ್ದರಾಮಯ್ಯ  

Last Updated : Nov 1, 2019, 03:31 PM IST
ಡಿಕೆಶಿ-ನನ್ನ ನಡುವೆ ಭಿನ್ನ ಅಭಿಪ್ರಾಯವಿರಬಹುದು, ಭಿನ್ನಾಭಿಪ್ರಾಯವಲ್ಲ: ಸಿದ್ದರಾಮಯ್ಯ title=
Photo Courtesy: Twitter/@Siddaramaiah

ಬೆಂಗಳೂರು: ನನ್ನ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನ ಅಭಿಪ್ರಾಯವಿರಬಹುದು, ಆದರೆ ಭಿನ್ನಾಭಿಪ್ರಾಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ  ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಪಕ್ಷದಲ್ಲಿ(ಕಾಂಗ್ರೆಸ್) ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಂತೆಯೇ ನನ್ನ-ಡಿಕೆಶಿ ಮಧ್ಯೆ ಭಿನ್ನ ಅಭಿಪ್ರಾಯವಿರಬಹುದು. ಆದರೆ ಪಕ್ಷಕ್ಕೆ ಧಕ್ಕೆ ಆಗುವಂತಹ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹೈದ ಸಿದ್ದರಾಮಯ್ಯ, ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ. ಆಪರೇಷನ್​ ಕಮಲದ ಮೂಲಕ ಬಿ.ಎಸ್​.ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. 

ಪ್ರವಾಹ ಬಂದು 90 ದಿನಗಳಾಗುತ್ತಿದೆ. ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಹೇಳಿದರೆ ನಾನು ಸುಳ್ಳು ಹೇಳ್ತೇನೆ ಎಂದು 
ಯಡಿಯೂರಪ್ಪ ಹೇಳುತ್ತಾರೆ. 4 ದಶಕಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಿಂದ ಮುಖ್ಯಮಂತ್ರಿವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಎಲ್ಲಿಂದ ಮಾಹಿತಿ ಪಡೆಯಬೇಕೆಂದು ಗೊತ್ತಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನೆರೆಯಿಂದ 2,47,628  ಮನೆಗಳು ಬಿದ್ದಿವೆ ಎಂದು ಕೇಂದ್ರಕ್ಕೆ ಕೊಟ್ಟಿರುವ ಲೆಕ್ಕ. 92,920 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಜಾಹಿರಾತಿನಲ್ಲಿ ಕೊಟ್ಟಿರುವ ಲೆಕ್ಕ. ಈ ಎರಡರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂದು ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿ ತನ್ನ ನೂರು ದಿನದ ಆಡಳಿತದಲ್ಲಿ ಸತ್ಯಕ್ಕಿಂತ ಸುಳ್ಳು ಹೇಳಿದ್ದೇ ಹೆಚ್ಚು. ಯಡಿಯೂರಪ್ಪನವರ ನೂರು ದಿನಗಳ ಸಾಧನೆ. ಒಂದು ದೊಡ್ಡ ಸೊನ್ನೆ ಎಂದು ಲೇವಡಿ ಮಾಡಿದರು.

Trending News