ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನದ ಕುರಿತ ಮಹಾನಾಯಕ ಧಾರವಾಹಿಯನ್ನು ಸ್ಥಗಿತಗೊಳಿಸುವಂತೆ ವಾಹಿನಿಗೆ ಬೆದರಿಕೆ ನೀಡಲಾಗಿದೆ.
ಈ ವಿಷಯವನ್ನು ಜಿ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ತಮ್ಮ ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ತಿಳಿಸಿದ್ದಾರೆ.' ಮಹಾನಾಯಕ' ಧಾರಾವಾಹಿ ನಿಲ್ಲಿಸುವಂತೆ ಸಾಕಷ್ಟು ಸಂದೇಶಗಳು ಹಾಗೂ ಮಧ್ಯರಾತ್ರಿ ಕರೆ ಬರುತ್ತಿವೆ. ಇದು ಬೆದರಿಕೆಯಂತೆ ಕಾಣುತ್ತಿದೆ. ಇದರ ಬಗ್ಗೆ ನಾವು ಕೇರ್ ಮಾಡುವುದಿಲ್ಲ. 'ಮಹಾನಾಯಕ' ಧಾರಾವಾಹಿ ಮುಂದುವರೆಯುತ್ತದೆ.ಇದು ನಮ್ಮ ಹೆಮ್ಮೆ, ವೈಯಕ್ತಿಕವಾಗಿ ಈ ಸೀರಿಯಲ್ ಬಗ್ಗೆ ನನಗೆ ಪ್ರೀತಿಯಿದೆ. ನಿಜಕ್ಕೂ ಸಮಾಜದಲ್ಲಿ ಇದು ಸಮಸ್ಯೆ ಎಂದು ತಿಳಿದುಕೊಂಡರೆ, ಸಮಾಜಕ್ಕೆ ನೀವೇ ಸಮಸ್ಯೆ' ಎಂದು ಟ್ವೀಟ್ ಮಾಡಿದ್ದಾರೆ.
ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೆ ಸಾಕಷ್ಟು ಜನರು ಬೆಂಬಲಕ್ಕೆ ನಿಂತಿದ್ದಾರೆ."ಎಲ್ಲರೂ ರಾಘವೇಂದ್ರ ಹುಣಸೂರು ಸರ್ ಜೊತೆಗೆ ನಿಲ್ಲೋಣ, ಸರ್ ನಿಮ್ಮಜೊತೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ನಾವಿದ್ದೀವಿ ಹೆದರದೆ, ಕುಗ್ಗದೆ ಮಹಾನಾಯಕ ಧಾರಾವಾಹಿಯನ್ನು ಪ್ರಸಾರ ಮಾಡಿ ಸರ್ 'ಎಂದು ನೆಟ್ಟಿಗರು ಪ್ರತಿಕ್ರಿಯಿದ್ದಾರೆ.