ಬೆಂಗಳೂರು: ನಗರದ ಎಇಸಿಎಸ್ ಲೇಔಟಿನಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಡ್ರೇನೇಜ್ ಸ್ವಚ್ಛಗೊಳಿಸಲು ಬಂದಿದ್ದ ಇಬ್ಬರು ಕಾರ್ಮಿಕರು ಮ್ಯಾನ್ ಹೋಲ್'ಗೆ ಬಲಿಯಾಗಿರುವ ದುರ್ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಘಟನೆ ಸಂಬಂಧ ಹೋಟೆಲ್ ವ್ಯವಸ್ಥಾಪಕ ಆಯುಷ್ ಗುಪ್ತಾ ಹಾಗೂ ಕಟ್ಟಡದ ನಿರ್ವಹಣೆ ಉಸ್ತುವಾರಿ ವೆಂಕಟೇಶ್ನನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಮೂಲದ 35 ವರ್ಷದ ರಾಮು ಮತ್ತು 28 ವರ್ಷದ ರವಿ ಎಂಬ ಮೃತ ದುರ್ದೈವಿಗಳು. ಸಾವನ್ನಪ್ಪಿರುವ ಇಬ್ಬರೂ ಪೌರ ಕಾರ್ಮಿಕರಾಗಿದ್ದು ಯಮ್ ಲೋಕ್ ರೆಸ್ಟೋರೆಂಟಿನವರು ಹಣದ ಆಸೆ ತೋರಿಸಿದ ಕಾರಣ ಹಬ್ಬದ ದಿನವಾದರೂ ಡ್ರೈನೇಜ್ ಸ್ವಚ್ಚತೆಗೆ ತೆರಳಿದ್ದರು.
ಮೊದಲಿಗೆ ರಾಮು ಡ್ರೇನೇಜ್ ಸ್ವಚ್ಛಗೊಳಿಸಲು ಇಳಿದಿದ್ದರು. ಮಾಸ್ಕ್ ಇಲ್ಲದೆ ಸ್ವಚ್ಚತೆ ಕಾರ್ಯದಲ್ಲಿ ತೊಡಗಿದ್ದ ರಾಮುಗೆ ಉಸಿರಾಟದ ತೊಂದರೆ ಆಗಿದ್ದರಿಂದ ಅವರ ರಕ್ಷಣೆಗಾಗಿ ರವಿ ಸಹ ಗುಂಡಿಗೆ ಇಳಿದಿದ್ದರು. ಬಳಿಕ ಹೊರಬರಲಾರದೆ ಇಬ್ಬರೂ ಸಾವನ್ನಪ್ಪಿದರು.
ಘಟನೆ ಸಂಬಂಧ ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಹಾಸ ಪಟ್ಟು ಶವವನ್ನ ಹೊರತೆಗೆದರು. ನಂತರ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದರು.