‘ನೊಂದವರ ಪರ ಧ್ವನಿಯಾಗಿದ್ದ ಸಾಮಾಜಿಕ ಬದ್ಧತೆಯ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ’

ಬರವಣಿಗೆ, ಹೋರಾಟಕ್ಕೆ ಜೀವನ ಮುಡುಪಾಗಿಟ್ಟ ಮಹಾನ್ ಚೇತನ ವಿಠ್ಠಪ್ಪ ಗೋರಂಟ್ಲಿ.

Written by - Zee Kannada News Desk | Last Updated : Jul 31, 2021, 03:30 PM IST
  • ಹಿರಿಯ ಪತ್ರಕರ್ತ ಹಾಗೂ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರು ಹೃದಯಾಘಾತದಿಂದ ಜು.23ರಂದು ಮೃತಪಟ್ಟಿದ್ದರು
  • ಹಲವು ವಿಷಯ, ವಿಚಾರಗಳ ಕುರಿತು ನಿಷ್ಠುರ ಬರವಣಿಗೆಯ ಮೂಲಕ ಗಮನ ಸೆಳೆದಿದ್ದ ಕೊಪ್ಪಳದ ಹಿರಿಯ ಪತ್ರಕರ್ತ
  • ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದ ಗೋರಂಟ್ಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
‘ನೊಂದವರ ಪರ ಧ್ವನಿಯಾಗಿದ್ದ ಸಾಮಾಜಿಕ ಬದ್ಧತೆಯ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ’ title=
ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರಿಗೆ ನುಡಿನಮನ ಸಲ್ಲಿಸಲಾಯಿತು

ಗದಗ: ಸಮಾಜದಲ್ಲಿನ ಅಸಮಾನತೆ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ಸದಾ ಸೆಣಸುವ ಬದ್ಧತೆಯನ್ನು ವಿಠ್ಠಪ್ಪ ಗೋರಂಟ್ಲಿ(Vittappa Gorantli) ಹೊಂದಿದ್ದರು ಎಂದು ಹಿರಿಯ ವಿಚಾರವಾದಿ ಅಲ್ಲಮಪ್ರಭು ಬೆಟದೂರ ಹೇಳಿದ್ದಾರೆ. ಗದಗ ನಗರದ ಬಸವ ಭವನದಲ್ಲಿಏರ್ಪಡಿಸಿದ್ದ ಇತ್ತೀಚಿಗೆ ಅಗಲಿದ ಕೊಪ್ಪಳದ ಸಾಮಾಜಿಕ ಹೋರಾಟಗಾರ, ಜೀವಪರ ಚಿಂತಕ ವಿಠ್ಠಪ್ಪ ಗೋರಂಟ್ಲಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸದಾ ಬರವಣಿಗೆ, ಹೋರಾಟ, ಆಧ್ಯಾತ್ಮಿಕ ಚಿಂತನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಚೇತನ ವಿಠ್ಠಪ್ಪ ಗೋರಂಟ್ಲಿ(Vittappa Gorantli). ಸಾಹಿತ್ಯ, ನಾಟಕ ರಚನೆ ಸೇರಿ ಅನೇಕ ಸಾಮಾಜಿಕ ಚಟುವಟಿಕೆಗಳ ಮೂಲಕ ಅವರು ಹೆಸರಾಗಿದ್ದರು. ಕೊಪ್ಪಳ ಜಿಲ್ಲೆಯ ಅನೇಕ ಭೂಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನೇಕಾರ ಸಮುದಾಯದಲ್ಲಿ ಹುಟ್ಟಿದ್ದರೂ ಜಾತಿಗೆ ಸೀಮಿತರಾಗದೇ ಎಲ್ಲ ವರ್ಗದ ಜನರ ಜೊತೆ ಸೇರಿಕೊಂಡು ಹೋರಾಟ ನಡೆಸುತ್ತಿದ್ದರು ಎಂದರು.

ಇದನ್ನೂ ಓದಿ: Basavaraja Bommai : ಕೇಂದ್ರದ 6 ಸಚಿವರೊಂದಿಗೆ ಪಿಎಂ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ

ನೇಕಾರರ ಸಾಲಮನ್ನಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರ(Mid Day Meal Workers) ಸಲುವಾಗಿ ಅನೇಕ ಹೋರಾಟಗಳನ್ನು ಮಾಡಿ ಅವರ ಬದುಕಿಗೆ ಆಸರೆಯಾಗಿದ್ದರು. ವಿಠ್ಠಪ್ಪನವರು ನಾಟಕಗಳನ್ನು ರಚಿಸಿ ಸ್ವತಃ ಅವರೇ ಅಭಿನಯಿಸುತ್ತಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಅವರ ಅಗಲಿಕೆ ನಿಜಕ್ಕೂ ನೋವು ತಂದಿದೆ. ಮುಂದಿನ ಪೀಳಿಗೆಗೆ ಅವರು ಆದರ್ಶರಾಗಿದ್ದಾರೆಂದು ಹೇಳಿದರು.

ಬಸವರಾಜ ಶೀಲವಂತರ ಮಾತನಾಡಿ, ವಿಠ್ಠಪ್ಪ ಗೋರಂಟ್ಲಿಯವರು ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ತಮ್ಮ ಇಳಿವಯಸ್ಸಿನಲ್ಲಿಯೂ ಸಹ ಎಲ್ಲಿಯೇ ದೌರ್ಜನ್ಯ ನಡೆದರೂ ಖಂಡಿಸುತ್ತಿದ್ದರು. ಕೊಪ್ಪಳದ ಕುದರಿಮೋತಿ ಪ್ರಕರಣ ಹೋರಾಟ, ಬಸಾಪುರದ ಭೂಮಿ ಹೋರಾಟ, ದಲಿತ ಯುವಕ ಯಲ್ಲಾಲಿಂಗನ ಕೊಲೆ ಪ್ರಕರಣ, ಕಾರಟಗಿಯ ದಾನಪ್ಪನ ಕೊಲೆ ಪ್ರಕರಣದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರು ಎಂಥದೇ ಒತ್ತಡಕ್ಕೆ ಮಣಿಯದ ಪ್ರಾಮಾಣಿಕ, ಸ್ವಚ್ಛ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಇದನ್ನೂ ಓದಿ: JDS ಬಲಿಷ್ಠ ಪಕ್ಷವೆಂದ ಅನಂತ್ ಕುಮಾರ್ ಪುತ್ರಿ: ವ್ಯಾಪಕ ಚರ್ಚೆಗೆ ಕಾರಣವಾಯ್ತು ಟ್ವೀಟ್..!

ಧಾರವಾಡದ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಬಿ.ಎ.ಕೆಂಚರಡ್ಡಿ ವಹಿಸಿದ್ದರು. ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ, ಅಶೋಕ ಬರಗುಂಡಿ, ವೆಂಕಟೇಶಯ್ಯ, ಶೇಖಣ್ಣ ಕವಳಿಕಾಯಿ ಮತ್ತಿತರರು ಉಪಸ್ಥಿತರಿದ್ದರು.

ನೊಂದವರ ಪರ ಧ್ವನಿ ಎತ್ತಿದ್ದ ವಿಠ್ಠಪ್ಪ ಗೋರಂಟ್ಲಿ

ಹಿರಿಯ ಪತ್ರಕರ್ತ ಹಾಗೂ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರು ಹೃದಯಾಘಾತದಿಂದ ಜುಲೈ 23ರಂದು ಮೃತಪಟ್ಟಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಹಲವು ವಿಷಯಗಳ ಕುರಿತು ನಿಷ್ಠುರ ಬರವಣಿಗೆ ಮೂಲಕ  ಗಮನ ಸೆಳೆದಿದ್ದರು. ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿದ್ದರು.

ವಿಠ್ಠಪ್ಪ ಗೋರಂಟ್ಲಿಯವರಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೂರಾರು ಸಂಘ ಸಂಸ್ಥೆಗಳು ಕೂಡ ಅವರನ್ನು ಸನ್ಮಾನಿಸಿ ಗೌರವಿಸಿವೆ. ಅವರ ನಿಧನಕ್ಕೆ ಸಾಹಿತ್ಯ ಬಳಗ ಕಂಬನಿ ಮಿಡಿದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News