ಬೆಂಗಳೂರು: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳ ಜೊತೆ ಇಂದು ಪ್ರಗತಿ ಪರಿಶೀಲನೆ ನಡೆಸಿದರು.
ಸ್ಥಳೀಯ ನಾಗರಿಕರು ಮುಖ್ಯ ಆಯುಕ್ತರನ್ನು ಭೇಟಿಯಾಗಿ ಹೆಚ್.ಎಸ್.ಆರ್. ಲೇಔಟ್ ನಲ್ಲಿ ಪ್ರತಿ ಮಳೆಗಾಲದಲ್ಲೂ ಸಮಸ್ಯೆಯಾಗ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ನೀಡಲು ಮನವಿ ಮಾಡಿದರು.
ಹೆಚ್.ಎಸ್.ಆರ್ ಲೇಔಟ್ 6ನೇ ಸೆಕ್ಟರ್ ನ, 3ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ ಪ್ರದೇಶವು ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆಗಾದಲ್ಲಿ ಜಲಾವೃತವಾಗುತ್ತದೆ. ಇದಕ್ಕೆ ಹೊಸದಾಗಿ 286 ಮೀಟಿರ್ ಸೈಡ್ ಡ್ರೈನ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಮುಖ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಮಳೆಗಾಲದ ವೇಳೆ ಈ ಭಾಗದಲ್ಲಿ ಸಂಪೂರ್ಣವಾಗಿ ಜಾಲಾವೃತವಾಗುವ ಸಮಸ್ಯೆ ಬಗೆಹರಿಯಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಹೆಚ್.ಎಸ್.ಆರ್ ಲೇಔಟ್ 9ನೇ ಮುಖ್ಯ ರಸ್ತೆಯ ಬಳಿ 1.5 ಮೀಟರ್ ಎತ್ತರವಿರುವ ಸೇತುವೆಯನ್ನು, 3.5 ಮೀಟರ್ ಎತ್ತರ(15 ಮೀಟರ್ ಉದ್ದ, 18 ಮೀಟರ್ ಅಗಲ)ಕ್ಕೆ ಎತ್ತರಿಸಲಾಗಿದ್ದು, ಇದಿರಂದ ಪ್ರಮುಖ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಿದೆ. ಇದಲ್ಲದೆ ಹೆಚ್.ಎಸ್.ಆರ್ ಲೇಔಟ್ ನಲ್ಲಿ ನೀರು ನಿಲ್ಲದೇ ಇರುವ ಹಾಗೆ ಮಾಡಲು ಪ್ರಮುಖ ರಾಜಕಾಲುವೆಯಲ್ಲಿ 600 ಮೀಟರ್ ಉದ್ದದ ಪರ್ಯಾಯ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಜೋರು ಮಳೆಯಾದಾಗ ಬ್ಯಾಕ್ ವಾಟರ್ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಪರಿಶೀಲನೆ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಕಾಮಗಾರಿ ಕೈಗತ್ತಿಕೊಳ್ಳಲಾಗಿದೆ. ಇತ್ತೀಚೆಗೆ ವೇಗವಾಗಿ ಗಾಳಿ ಬಂದ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರೇಕ್ಷರ ಗ್ಯಾಲರಿಗೆ ಅಳವಡಿಸಿದ್ದ ಟೆನ್ಸಲ್ ರೂಫ್ ಬಿದ್ದಿರುತ್ತದೆ. ಈ ಪೈಕಿ ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಗುತ್ತಿಗೆದಾರರಿಂದಲೇ ದುರಸ್ತಿ ಕಾರ್ಯವನ್ನು ಕೈಗೊಂಡು ಒಂದು ತಿಂಗಳಲ್ಲಿ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು
ಅನುಗ್ರಹ ಲೇಔಟ್, ಮಡಿವಾಳ ಕೆರೆ ಬಳಿಯ ರಾಜಕಾಲುವೆ ಪರಿಶೀಲನೆ:
ಅನುಗ್ರಹ ಲೇಔಟ್ ಕೆಳಭಾಗದಲ್ಲಿರುವ ಕಾರಣ ಪ್ರತಿ ಬಾರಿ ಮಳೆಯಾದ ವೇಳೆ ಫೇಸ್-1 ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈ ಪೈಕಿ ಮಳೆಗಾಲ್ಲಿ 45 ಹೆಚ್.ಪಿ ಯಂತ್ರವನ್ನು ಸ್ಥಳದಲ್ಲೇ ಇಡಲಾಗಿರುತ್ತದೆ. ಮಳೆ ಬಿದ್ದ ಕೂಡಲೆ ಪಂಪ್ ಮಾಡಿ ಮಡಿವಾಳ ಕೆರೆಗೆ ಸಂಪರ್ಕವಿರುವ ಕಾಲುವೆಗೆ ಬಿಡಲಾಗುತ್ತದೆ. ಈ ಭಾಗದಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಲ್ವರ್ಟ್ ನಿರ್ಮಿಸಿ ನೀರು ನಿಲ್ಲದಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಳೇನ ಅಗ್ರಹಾರ ಕೆರೆ ಹಾಗೂ ಸುತ್ತಮುತ್ತಲಿನ ಸ್ಥಳ ಪರಿಶೀಲನೆ
ಕಾಳೇನ ಅಗ್ರಹಾರ ಕೆರೆಯನ್ನು 3 ಕೋಟಿ ರೂ. ವೆಚ್ಚದಲ್ಲಿ 150 ಕೆ.ಎಲ್.ಡಿ ಸಾಮರ್ಥ್ಯಸ ಎಸ್.ಟಿ.ಪಿ ಪ್ಲಾಂಟ್, ಕೆರೆಯ ಸುತ್ತಲೂ ಫೆನ್ಸಿಂಗ್ ಅಳವಡಿಕೆ, ವಾಯು ವಿಹಾರ ಮಾರ್ಗ ಸೇರಿದಂತೆ, ಸಸಿಗಳನ್ನು ನೆಟ್ಟಿರುವುದು ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಈ ಸಂಬಂಧ ಏನೆಲ್ಲಾ ಕೆಲಸ ಮಾಡಲಾಗಿದೆಯೋ ಅದರ ಮಾಹಿತಿಯುಳ್ಳ ಶಾಶ್ವತ ನಾಮಫಲಕವನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ನಲ್ಲಿ ವಿಶ್ರಾಂತಿ ಪಡೆಯಲು ಮೊದಲ ಹಂತದಲ್ಲಿ 227 ಸ್ಥಳಗಳಲ್ಲಿ ಸುವಿಧಾ ಕ್ಯಾಬ್ ಗಳನ್ನು ಅಳವಡಿಸಲಾಗುತ್ತಿದ್ದು, ಇನ್ನೂ ಬೇರೆಡೆ ಗುರುತಿಸಿರುವ ಸ್ಥಳಗಳಲ್ಲಿಯೂ ತ್ವರಿತವಾಗಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಿಶ್ರಾಂತಿ ಕೊಠಡಿಯಿಲ್ಲದಿರುವ ಕಡೆ ಪಾಲಿಕೆ ಆಸ್ಪತ್ರೆ, ಶಾಲೆ, ಕಛೇರಿಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸಲು ಅನುವು ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ವೀವರ್ಸ್ ಕಾಲೋನಿಯಲ್ಲಿ ರಾಜಕಾಲುವೆ ಪರಿಶೀಲನೆ ನಡೆಸಿ, ಕಚ್ಚಾ ಡ್ರೈನ್ ಅನ್ನು ಕೂಡಲೆ ದುರಸ್ತಿಪಡಿಸಿ ತಡೆಗೋಡೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಗೊಟ್ಟಿಗೆರೆ ಮುಖ್ಯ ರಸ್ತೆಯಲ್ಲಿರುವ 5 ಎಕರೆ ಪ್ರದೇಶದ ಸುಬ್ಬರಾಯನ ಕೆರೆಯನ್ನು 2.6 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪರಿಶೀಲಿಸಿದರು.
ಪರಿಶೀಲನೆ ವೇಳೆ ಶಾಸಕರಾದ ಸತೀಶ್ ರೆಡ್ಡಿ, ಕೃಷ್ಣಪ್ಪ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.