Sharad Purnima 2022 Muhurat: ಅಶ್ವಿನಿ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ, ಶೀಗೆ ಹುಣ್ಣಿಮೆ, ಭೂಮಿ ಹುಣ್ಣಿಮೆ, ಕೊಜಾಗಿರಿ ಹುಣ್ಣಿಮೆ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ವರ್ಷದಲ್ಲಿ ಬರುವ ಒಟ್ಟು 12 ಹುಣ್ಣಿಮೆಗಳಲ್ಲಿ ಈ ಹುಣ್ಣಿಮೆಯನ್ನು ಅತ್ಯಂತ್ರ ಶ್ರೇಷ್ಠ ಹುಣ್ಣಿಮೆ ಎಂದು ಭಾವಿಸಲಾಗುತ್ತದೆ. ಈ ಹುಣ್ಣಿಮೆಯ ದಿನ ಚಂದ್ರ ಸಕಲ 16 ಕಲಾವಲ್ಲಭನಾಗಿರುತ್ತಾನೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ಈ ಹುಣ್ಣಿಮೆಯ ದಿನ ಶ್ರೀಕೃಷ್ಣ ಬ್ರುಜ್ ಮಂಡಲದಲ್ಲಿ ಗೋಪಿಯರ ಜೊತೆಗೆ ರಾಸಲೀಲೆ ಮಾಡಿದ್ದ ಅಂಬುದು ಐತಿಹ್ಯ. ಇದೆ ಕಾರಣದಿಂದ ಉತ್ತರ ಭಾರತದಲ್ಲಿ ಇದನ್ನು ರಾಸ ಹುಣ್ಣಿಮೆ ಎಂದೂ ಕೂಡ ಕರೆಯಲಾಗುತ್ತದೆ.
ಪೌರಾಣಿಕ ನಂಬಿಕೆಗಳ ಪ್ರಕಾರ ಈ ದಿನ ಸಮುದ್ರ ಮಂಥನದ ವೇಳೆ ತಾಯಿ ಲಕ್ಷ್ಮಿ ಪ್ರಕಟಗೊಂಡಿದ್ದಳು ಎನ್ನಲಾಗಿದೆ. ಈ ದಿನ ತಾಯಿ ಲಕ್ಷ್ಮಿಗೆ ಪೂಜೆ ಸಲ್ಲಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ತಾಯಿ ಲಕ್ಷ್ಮಿ ಪ್ರಸನ್ನಳಾಗಿ ಜೀವನದಲ್ಲಿ ಸುಖ-ಸಮೃದ್ಧಿ ದಯಪಾಲಿಸುತ್ತಾಳೆ. ಈ ಹುಣ್ಣಿಮೆಯ ಇನ್ನೊಂದು ಹೆಸರು ವ್ರತ ಎಂದೂ ಕೂಡ ಆಗುತ್ತದೆ. ಇದು ಸಂಸ್ಕೃತ ಭಾಷೆಯ ಜಾಗ್ರತಿಯಿಂದ ನಿರ್ಮಾಣಗೊಂಡಿದೆ
ಪೂಜಾ ವಿಧಿ
>> ಈ ಪವಿತ್ರ ದಿನದಂದು ಬೆಳಗ್ಗೆ ಬೇಗನೆ ಎದ್ದು ಪ್ರಾತಃ ವಿಧಿಗಳಿಂದ ನಿವೃತ್ತಿಯನ್ನು ಪಡೆದು ಪವಿತ್ರ ನದಿಯಲ್ಲಿ ಮಿಂದೇಳುವುದಕ್ಕೆ ತುಂಬಾ ಮಹತ್ವವಿದೆ. ಇದು ಒಂದು ವೇಳೆ ಸಾಧ್ಯವಾಗದೆ ಹೋದಲ್ಲಿ, ಸ್ನಾನದ ನೀರಿಗೆ ಗಂಗಾಜಲ ಬೆರೆಸಿ ಕೂಡ ನೀವು ಸ್ನಾನ ಮಾಡಬಹುದು. ಸ್ನಾನ ಮಾಡುವ ವೇಳೆ ಎಲ್ಲ ಪವಿತ್ರ ನದಿಗಳನ್ನು ಸ್ಮರಿಸಿ.
>> ಸ್ನಾನದ ಬಳಿಕ ಮೊಟ್ಟಮೊದಲು ಮನೆಯ ದೇವರ ಕೋಣೆಯಲ್ಲಿ ದೀಪ ಪ್ರಜ್ವಲಿಸಿ.
>> ಸಾಧ್ಯವಾದರೆ ಈ ದಿನ ಉಪವಾಸ ಕೈಗೊಳ್ಳಿ
>> ದೇವರ ಕೋಣೆಯಲ್ಲಿರುವ ಎಲ್ಲಾ ದೇವ-ದೇವತೆಗಳಿಗೆ ಗಂಗಾಜಲದ ಅಭಿಷೇಕ ಮಾಡಿ.
>> ಹುಣ್ಣಿಮೆಯ ಪವಿತ್ರ ದಿನದಂದು ಶ್ರೀವಿಷ್ಣುವಿನ ಪೂಜೆ -ಅರ್ಚನೆಗೆ ವಿಶೇಷ ಮಹತ್ವವಿದೆ.
>> ಈ ದಿನ ಶ್ರೀವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮಿಯ ಪೂಜೆ ಕೂಡ ನೆರವೇರಿಸಿ.
>> ಬಳಿಕ ಶ್ರೀವಿಷ್ಣುವಿಗೆ ನೈವೇದ್ಯ ಅರ್ಪಿಸಿ ಹಾಗೂ ನೈವೇದ್ಯದಲ್ಲಿ ತುಳಸಿಯನ್ನು ಅರ್ಪಿಸುವುದನ್ನು ಮರೆಯಬೇಡಿ. ಏಕೆಂದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಇಲ್ಲದ ನೈವೇದ್ಯವನ್ನು ಶ್ರೀವಿಷ್ಣು ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ನಿಮ್ಮ ನೈವೇದ್ಯ ಸಾತ್ವಿಕ ನೈವೇದ್ಯವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
>> ಬಳಿಕ ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿಗೆ ಆರತಿ ಬೆಳಗಿ.
>> ಈ ಪವಿತ್ರ ದಿನದಂದು ಸಾಧ್ಯವಾದಷ್ಟು ತಾಯಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಜಪ-ತಪ ಮಾಡಿ.
>> ಈ ಹುಣ್ಣಿಮೆಯ ದಿನ ಚಂದ್ರನಿಗೆ ಆರತಿ ಬೆಳಗುವ ವಿಶೇಷ ಸಂಪ್ರದಾಯವಿದೆ. ಹೀಗಾಗಿ ಚಂದ್ರೋದಯದ ಬಳಿಕ ಚಂದ್ರನಿಗೆ ಪೂಜೆ ನೆರವೇರಿಸಿ.
>> ಈ ದಿನ ಚಂದ್ರನಿಗೆ ಅರ್ಘ್ಯ ನೀಡುವುದರಿಂದ ಸಕಲ ದೋಷಗಳಿಂದ ಮುಕ್ತಿ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
>> ಈ ದಿನ ನಿರ್ಗತಿಗರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ.
>> ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಹಸು ಇದ್ದರೆ ಅದಕ್ಕೆ ಊಟ ಕೊಡಿ. ಹಸುವಿಗೆ ಊಟ ಕೊಡುವುದರಿಂದ ಹಲವು ರೀತಿಯ ದೋಷಗಳಿಂದ ಮುಕ್ತಿ ಸಿಗುತ್ತದೆ.
ಶರದ್ ಹುಣ್ಣಿಮೆಯ ಶುಭ ಮುಹೂರ್ತ
>> ಶೀಗೆ ಹುಣ್ಣಿಮೆಯ ದಿನಾಂಕ: ಭಾನುವಾರ, ಅಕ್ಟೋಬರ್ 9, 2022.
>> ಚಂದ್ರೋದಯದ ಸಮಯ: ಸಂಜೆ 5.51ಕ್ಕೆ.
>> ಹುಣ್ಣಿಮೆಯ ತಿಥಿ ಆರಂಭ: ಅಕ್ಟೋಬರ್ 9, 2022 ರಂದು ಬೆಳಗ್ಗೆ 3.41
>> ಹುಣ್ಣಿಮೆಯ ತಿಥಿ ಸಮಾಪ್ತಿ: ಅಕ್ಟೋಬರ 10, 2022 ರಂದು ಬೆಳಗ್ಗೆ 2.24 ರವರೆಗೆ.
ಕರ್ನಾಟಕದಲ್ಲಿ ಶೀಗಿ ಹುಣ್ಣಿಮೆ ಅಥವಾ ಶೀಗೆ ಹುಣ್ಣಿಮೆ ಸಂಭ್ರಮ ಹೇಗಿರುತ್ತದೆ
ಕರ್ನಾಟಕದ ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ತಮ್ಮ ಫಸಲಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿಸಿ ಉತ್ತಮ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದಿನ ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವ ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಭೂಮಣ್ಣಿ ಬುಟ್ಟಿಗಳಲ್ಲಿ ವಿಶೇಷ ರೀತಿಯ ಖಾದ್ಯಗಳನ್ನು ತಯಾರಿಸಿ, ಹೊಲಗದ್ದೆಗಳಲ್ಲಿ ಎಡೆ ಇಡಲಾಗುತ್ತದೆ. ಬಳಿಕ ಎಲ್ಲಾ ಖಾಧ್ಯ ಪದಾರ್ಥಗಳನ್ನು ಬೆರೆಸಿ ಹೊಲದ ಎಲ್ಲಾ ಭಾಗಗಳಲ್ಲಿ ಬೀರಲಾಗುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಈ ಸಂಪ್ರದಾಯಕ್ಕೆ 'ಚರಗ ಚೆಲ್ಲುವ ಸಂಪ್ರದಾಯ' ಎಂದು ಕರೆಯಲಾಗುತ್ತದೆ. ಈ ದಿನ ಕುಟುಂಬ ಸದಸ್ಯರೆಲ್ಲ ಹೊಲದಲ್ಲಿಯೇ ಕುಳಿತು ಭೋಜನ ಮಾಡುವ ವಿಶೇಷ ಸಂಪ್ರದಾಯವಿದೆ.
ಇದನ್ನೂ ಓದಿ-Tulsi Remedies : ಹಣದ ಸಮಸ್ಯೆ ನೀಗಲು ತುಳಸಿ ಗಿಡದಿಂದ ಹೀಗೆ ಮಾಡಿದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ!
ಏನಿದು ಭೂಮಣ್ಣಿ ಬುಟ್ಟಿ? ಅದನ್ನು ಹೇಗೆ ತಯಾರಿಸಬೇಕು?
ಶೀಗೆ ಹುಣ್ಣಿಮೆಯ ದಿನ ಭೂಮಣ್ಣಿ ಬುಟ್ಟಿ ತಯಾರಿಕೆಗೆ ವಿಶೇಷ ಮಹತ್ವವಿದೆ. ಇದಕ್ಕಾಗಿ ಒಂದು ದೊಡ್ಡ ಹಾಗೂ ಒಂದು ಚಿಕ್ಕ ಬುಟ್ಟಿಯನ್ನು ತೆಗೆದುಕೊಂಡು, ಆ ಬುಟ್ಟಿಗಳಿಗೆ ಹಸುವಿನ ಸಗಣಿ ಹಾಗೂ ಕೆಂಪು ಮಣ್ಣಿನ ಮಿಶ್ರಣ ತಯಾರಿಸಿ ಸರಿಯಾಗಿ ಹಚ್ಚಿಕೊಳ್ಳಿ. ಒಣಗಿದ ಬಳಿಕ ಅದರ ಮೇಲೆ ಅಕ್ಕಿ ಹಿಟ್ಟನ್ನು ನೀರಲ್ಲಿ ಬೆರಸಿ ಚಿತ್ರಗಳನ್ನು ಬಿಡಿಸಿ. ನಂತರ, ಕುಟುಂಬದ ಮಹಿಳಾ ಸದಸ್ಯರು ಅದಕ್ಕೆ ಶೃಂಗಾರ ಮಾಡುತ್ತಾರೆ. ಸಾಮಾನ್ಯವಾಗಿ ದಸರಾ ಹಬ್ಬಕ್ಕೆ ತೆರೆಬೀಳುತ್ತಿದ್ದಂತೆ ಈ ಬುಟ್ಟಿಗಳ ತಯಾರಿಕೆಗೆ ಚಾಲನೆ ನೀಡಲಾಗುತ್ತದೆ. ಬಳಿಕ ರಾತ್ರಿ ಇಡೀ ಮಹಿಳೆಯರು ಮನೆಯಲ್ಲಿ ವಿಶೇಷ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ಬುಟ್ಟಿಯಲ್ಲಿರಿಸುತ್ತಾರೆ. ಇದಾದ ಬಳಿಕ ವಿವಿಧ ತರಕಾರಿ ಸೊಪ್ಪುಗಳನ್ನು ಬೆರೆಸಿ ಹಚ್ಚಂಬಲಿ ತಯಾರಿಸಿ ಆ ಬುಟ್ಟಿಗಳಲ್ಲಿ ಇರಿಸುತ್ತಾರೆ. ಗದ್ದೆಯಲ್ಲಿ ಒಂದೊಮ್ಮೆ ಭೂಮಿ ತಾಯಿಗೆ ಪೂಜೆ ನೆರವೇರಿದ ಬಳಿಕ ಹಚ್ಚಂಬಲಿಯ ಜೊತೆಗೆ ಆಹಾರ ಪದಾರ್ಥಗಳನ್ನು 'ಅಚ್ಚಂಬಲಿ ಹಾಲಂಬಲಿ ಗುಡ್ಡದ ಮೇಲಿಂದ ನೂರೊಂದು ಕುಡಿ ಭೂ ತಾಯಿ ಬಂದು ಉಂಡೋಗಲಿ' ಎಂದು ಹೇಳುತ್ತಾ ಗದ್ದೆಯ ಎಲ್ಲಾ ಕಡೆ ಬೀರಲಾಗುತ್ತದೆ.
ಇದನ್ನೂ ಓದಿ-ವಿಪರೀತ ರಾಜಯೋಗ ರೂಪಿಸುತ್ತಿರುವ ಶನಿದೇವ, ಮೂರು ರಾಶಿಯವರಿಗೆ ನೀಡಲಿದ್ದಾನೆ ಯಶಸ್ಸು
ಹೇಗೆ ಪೂಜೆ ಸಲ್ಲಿಸಲಾಗುತ್ತದೆ
ಹೊಲದಲ್ಲಿ ಪೂಜೆ ಸಲ್ಲಿಸಲು ಮಹಿಳೆಯರು ಫಸಲಿನ ಒಂದು ಭಾಗದಲ್ಲಿ ಬಾಳೆಬಚ್ಚಿ ಮಂಟಪವನ್ನು ತಯಾರಿಸಿ, ಫಸಲಿಗೆ ದೇವರ ಕೋಣೆಯಲ್ಲಿರಿಸಿದ ತಾಳಿ ಕಟ್ಟುತ್ತಾರೆ ಮತ್ತು ಪೂಜೆಯನ್ನು ಸಲ್ಲಿಸುತ್ತಾರೆ. ಇಂದಿನ ದಿನ ಕಾಗೆಗಳಿಗೆ, ಇಲಿಗಳಿಗೆ ಅಥವಾ ಕುಟುಂಬವನ್ನು ಅಗಲಿದ ಹಿರಿಯರಿಗಾಗಿ ಎಡೆ ಅರ್ಪಿಸುವ ವಿಶೇಷ ಸಂಪ್ರದಾಯ ಕೂಡ ಇದೆ. ಬೆಳೆಗಳಿಗೆ ಯಾವುದೇ ರೀತಿಯ ಹಾನಿ ಮಾಡದಿರಲು ರೈತರು ಮೂಷಕನಿಗೆ ಬೆಳೆಯ ಪಾಲು ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.