ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರಂತರ ಫಾರ್ಮ್ ಮೂಲಕ ಅದ್ಬುತ ಸ್ಕೋರ್ ಗಳಿಸುತ್ತಿದ್ದಾರೆ.ಅದರಲ್ಲೂ ಇತ್ತೀಚಿಗೆ ಪ್ರತಿ ಪಂದ್ಯದಲ್ಲೂ ಶತಕವನ್ನು ಗಳಿಸತೊಡಗಿದ್ದಾರೆ.ಈ ಕಾರಣಕ್ಕಾಗಿ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್ ಅವರಿಗೆ ಹೋಲಿಸಿದ್ದಾರೆ.
ವಿಂಡಿಸ್ ವಿರುದ್ದದ ಸರಣಿಯಲ್ಲಿ ಈಗಾಗಲೇ ಕೊಹ್ಲಿ ಮೂರು ಪಂದ್ಯಗಳಲ್ಲಿ ಸತತ ಮೂರು ಶತಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾದರು. ಈ ಪ್ರದರ್ಶನಕ್ಕೆ ಕೊಂಡಾಡಿರುವ ಗವಾಸ್ಕರ್ ಅವರು ಪತ್ರಿಕೆಗೆ ಬರೆದಿರುವ ಅಂಕಣವೊಂದರಲ್ಲಿ "ಕೊಹ್ಲಿ ಸ್ಥಿರತೆ ಮಹತ್ತರವಾದದ್ದು,ಎಲ್ಲಕ್ಕಿಂತ ಮುಖ್ಯವಾಗಿರುವುದೇನೆಂದರೆ ಅವರು ಪರಿಸ್ಥಿತಿಯನ್ನು ಗಮನಿಸಿ ತಂಡಕ್ಕೆ ಏನು ಬೇಕು ಎನ್ನುವದನ್ನು ಅರಿತುಕೊಂಡು ಅದರ ಪ್ರಕಾರ ಬ್ಯಾಟಿಂಗ್ ಮಾಡುತ್ತಾರೆ" ಎಂದು ತಿಳಿಸಿದ್ದಾರೆ.
ಇನ್ನು ಮುಂದುವರೆದು" ಕೊಹ್ಲಿ ಬ್ಯಾಟಿಂಗ್ ಗೆ ಇಳಿದಾಗ ಅವರು ಶತಕ ಗಳಿಸುವುದಿಲ್ಲ ಎನ್ನುವ ಸಂಶಯವೇ ಇರುವುದಿಲ್ಲ ಈ ಹಿಂದೆ ಈ ಭಾವನೆ ಸರ್ ಡಾನ್ ಬ್ರಾಡ್ಮನ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಇತ್ತು" ಎಂದು ತಿಳಿಸಿದ್ದಾರೆ.ಕೊಹ್ಲಿ ಇತ್ತೀಚಿಗೆಗಷ್ಟೇ ಅತಿ ವೇಗವಾಗಿ 10 ಸಾವಿರ ರನ್ ಗಳಿಸಿದ ದಾಖಲೆಯನ್ನು ಮಾಡಿದರು.ಈ ಹಿಂದೆ ಈ ದಾಖಲೆ ಮಾಸ್ತರ್ ಬ್ಲಾಸ್ಟರ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿತ್ತು.