ಮಂಗಳೂರು: ಸರ್ಕಾರದ ವಿರೋಧದ ನಡುವೆಯೂ ಬಿಜೆಪಿ ನಾಯಕರು ಜ್ಯೋತಿ ಸರ್ಕಲ್ ನಲ್ಲಿ ಬೈಕ್ ರ್ಯಾಲಿ ನಡೆಸಲು ಪ್ರಯತ್ನಿಸಿದ್ದಾರೆ. ಪೊಲೀಸರು ರ್ಯಾಲಿಯನ್ನು ತಡೆದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತು. ಈ ಸಂದರ್ಭದಲ್ಲಿ ಪೋಲೀಸರು ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಹಲವು ನಾಯಕರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರ ಹತ್ಯೆ ಖಂಡಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಇಂದು ಮಂಗಳೂರಿನಲ್ಲಿ ಇಂದು "ಮಂಗಳೂರ ಚಲೋ" ಸಮಾವೇಶವನ್ನು ಕೈಗೊಳ್ಳಲಾಗಿತ್ತು. ಜ್ಯೋತಿ ಸರ್ಕಲ್ನಲ್ಲಿ ಸಮಾವೇಶ ನಡೆಸದಂತೆ ಪೊಲೀಸರು ಸೂಚಿಸಿದ್ದರೂ ಸಹ ಬಿಜೆಪಿ ಬೈಕ್ ರ್ಯಾಲಿ ಕೈಗೊಂಡಿತ್ತು ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕಾರಣದಿಂದ ನಾಯಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಕಾರ್ಯಕರ್ತರ ಬಂದನದ ಬಗ್ಗೆ ಮಾತನಾಡಿರುವ ಸಂಸದ ನಳಿನ್ ಕುಮಾರ್ ಕಟಿಲ್ ನಮ್ಮ ಮಂಗಳೂರು ಚಲೋ ಚಳುವಳಿಯಿಂದ ಮುಖ್ಯಮಂತ್ರಿಗಳಿಗೆ ನಡುಕ ಹುಟ್ಟಿದೆ. ಆದ್ದರಿಂದ ಇದನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದರೆ. ಶೋಭಾ ಕರಂದ್ಲಾಜೆ ಸರ್ಕಾರ ಕೊಲೆಗಡುಕರಿಗೆ ರಕ್ಷಣೆ ನೀಡುತ್ತಿದೆ, ರ್ಯಾಲಿ ತಡೆಯುವ ಸಲುವಾಗಿ ಬಿಜೆಪಿ ಕಾರ್ಯಕರ್ತರನ್ನು ಬಂದಿಸುತ್ತಿರುವುದು ಸರ್ಕಾರದ ಹೇಡಿತನ ಎಂದಿದ್ದಾರೆ.