ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ: ಅಂತಾರಾಷ್ಟ್ರೀಯ ಪರಿಣಾಮಗಳು ಮತ್ತು ಬದಲಾಗುವ ಜಾಗತಿಕ ಚಿತ್ರಣಗಳು

ರಷ್ಯಾ ಫೆಬ್ರವರಿ 24, 2022ರಂದು ಉಕ್ರೇನಿನ ಮೇಲೆ ದಾಳಿ ನಡೆಸಿತು. ಈ ಕದನ ಆರಂಭವಾಗುತ್ತಿದ್ದ ಹಾಗೆಯೇ ಉಕ್ರೇನಿಯನ್ನರು ದೇಶ ತೊರೆದು ಪಲಾಯನ ಮಾಡತೊಡಗಿದರು. ಇನ್ನು ರಷ್ಯಾದ ಯುವಕರು ಕಡ್ಡಾಯ ಸೇನಾ ಸೇರ್ಪಡೆಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಅದರೊಡನೆ, ರಷ್ಯಾ ಕೈಗೊಂಡ ದಾಳಿಯ ಪರಿಣಾಮವಾಗಿ, ಇಷ್ಟು ವರ್ಷಗಳ ಕಾಲ ತಟಸ್ಥವಾಗಿದ್ದ ಫಿನ್ಲ್ಯಾಂಡ್ ಮತ್ತು ಸ್ವೀಡನ್‌ಗಳು ನ್ಯಾಟೋ ಸದಸ್ಯತ್ವಕ್ಕಾಗಿ ದುಂಬಾಲು ಬೀಳುವಂತಾಯಿತು.

Written by - Girish Linganna | Edited by - Yashaswini V | Last Updated : Mar 13, 2023, 11:54 AM IST
  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಯುದ್ಧದ ಸಂದರ್ಭದಲ್ಲಿ ನಡೆದ ಉಕ್ರೇನಿಯನ್ನರ ವಲಸೆ ಎರಡನೇ ಮಹಾಯುದ್ಧದ ಬಳಿಕ ಯುರೋಪಿನಲ್ಲೇ ಅತಿದೊಡ್ಡ ವಲಸೆ ಎನಿಸಿಕೊಂಡಿದೆ.
  • ಎಂಟು ಮಿಲಿಯನ್‌ಗೂ ಹೆಚ್ಚಿನ ಜನರು ಈಗಾಗಲೇ ದೇಶ ತೊರೆದಿದ್ದಾರೆ. ಇವರಲ್ಲಿ ಹಲವರನ್ನು ರಷ್ಯಾ ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಿದೆ.
  • ಉಳಿದ ಜನರು ಜರ್ಮನಿ, ಪೋಲ್ಯಾಂಡ್‌ಗಳ ಸಂಪನ್ಮೂಲಗಳಿಗೆ ಭಾರವಾಗಿ ಪರಿಣಮಿಸಿದ್ದು, ಶಿಕ್ಷಣ, ಆಸ್ಪತ್ರೆಗಳ ಸೇವೆಗಳಿಗೂ ಅವುಗಳನ್ನು ಅವಲಂಬಿಸಿದ್ದಾರೆ.
ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ: ಅಂತಾರಾಷ್ಟ್ರೀಯ ಪರಿಣಾಮಗಳು ಮತ್ತು ಬದಲಾಗುವ ಜಾಗತಿಕ ಚಿತ್ರಣಗಳು title=
Russia Ukraine War Impact

ಎರಡನೇ ಮಹಾಯುದ್ಧದ ನಂತರ, ಯುರೋಪಿನಲ್ಲಿ ಅತಿದೊಡ್ಡ ಸಮಸ್ಯೆಗಳನ್ನು ಉಂಟುಮಾಡಿರುವುದು ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಯುದ್ಧ. ಈ ಆಕ್ರಮಣಕ್ಕೆ ಒಂದು ವರ್ಷ ತುಂಬಿದ್ದರೂ, ಅದರ ಪರಿಣಾಮಗಳು ಇಂದಿಗೂ ಅನುಭವಕ್ಕೆ ಬರುತ್ತಿವೆ. ಈ ಯುದ್ಧದ ಪರಿಣಾಮವಾಗಿ, ಜಾಗತಿಕ ಮೈತ್ರಿಕೂಟಗಳಲ್ಲಿ ಬದಲಾವಣೆಗಳಾಗಿದ್ದು, ಯುದ್ಧ ಪೀಡಿತ ಪ್ರದೇಶಗಳ ಹೊರತಾಗಿಯೂ, ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡಿವೆ.

ರಷ್ಯಾ ಫೆಬ್ರವರಿ 24, 2022ರಂದು ಉಕ್ರೇನಿನ ಮೇಲೆ ದಾಳಿ ನಡೆಸಿತು. ಈ ಕದನ ಆರಂಭವಾಗುತ್ತಿದ್ದ ಹಾಗೆಯೇ ಉಕ್ರೇನಿಯನ್ನರು ದೇಶ ತೊರೆದು ಪಲಾಯನ ಮಾಡತೊಡಗಿದರು. ಇನ್ನು ರಷ್ಯಾದ ಯುವಕರು ಕಡ್ಡಾಯ ಸೇನಾ ಸೇರ್ಪಡೆಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಅದರೊಡನೆ, ರಷ್ಯಾ ಕೈಗೊಂಡ ದಾಳಿಯ ಪರಿಣಾಮವಾಗಿ, ಇಷ್ಟು ವರ್ಷಗಳ ಕಾಲ ತಟಸ್ಥವಾಗಿದ್ದ ಫಿನ್ಲ್ಯಾಂಡ್ ಮತ್ತು ಸ್ವೀಡನ್‌ಗಳು ನ್ಯಾಟೋ ಸದಸ್ಯತ್ವಕ್ಕಾಗಿ ದುಂಬಾಲು ಬೀಳುವಂತಾಯಿತು.

ಆಹಾರ ಮತ್ತು ಆರ್ಥಿಕತೆ:
ಆಫ್ರಿಕಾ ಖಂಡದ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳು ಬಹುಮಟ್ಟಿಗೆ ರಷ್ಯಾ ಮತ್ತು ಉಕ್ರೇನ್‌ಗಳು ಪೂರೈಸುವ ಗೋಧಿ, ಬಾರ್ಲಿ, ಜೋಳ ಮತ್ತು ಖಾದ್ಯ ತೈಲಗಳ ಮೇಲೆ ಅವಲಂಬಿತವಾಗಿದ್ದವು. ಟರ್ಕಿ ಮತ್ತು ವಿಶ್ವಸಂಸ್ಥೆಗಳು ಉಕ್ರೇನ್ ತನ್ನ ಆಹಾರ ಧಾನ್ಯಗಳನ್ನು ಕಪ್ಪು ಸಮುದ್ರದ ಬಂದರಿನ ಮೂಲಕ ತೆರಳಲು ಅನುಮತಿ ನೀಡಿದ್ದವು. ಆದರೆ ರಷ್ಯಾ ಇಂದಿಗೂ ಈ ಸಾಗಾಣಿಕೆಗೆ ಅಡ್ಡಿಪಡಿಸುತ್ತಲೇ ಇದೆ. ರಷ್ಯಾ ಜಗತ್ತಿನ ಅತಿದೊಡ್ಡ ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದಕನಾಗಿದ್ದು, ಈ ಉತ್ಪನ್ನಗಳ ಸಾಗಾಣಿಕೆಯಲ್ಲಿ ರಷ್ಯಾದ ಅಡ್ಡಿಪಡಿಸುವಿಕೆಯ ಪರಿಣಾಮವಾಗಿ ಚಾಡ್, ಟ್ಯುನೀಷಿಯಾ ಹಾಗೂ ಶ್ರೀಲಂಕಾಗಳಲ್ಲಿ ಆಹಾರ ಮತ್ತು ಅನಿಲಗಳ ಕೊರತೆ ಎದುರಾಗುತ್ತಿದೆ.

ಇದನ್ನೂ ಓದಿ- China : ಅಮೆರಿಕಾದಿಂದ ನಿರ್ಬಂಧ ಹೇರಲ್ಪಟ್ಟ ಏರೋಸ್ಪೇಸ್ ತಜ್ಞ ಈಗ ಚೀನಾದ ನೂತನ ರಕ್ಷಣಾ ಮುಖ್ಯಸ್ಥ!

ಸ್ಥಳಾಂತರಗೊಂಡ ಜನರು:
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಯುದ್ಧದ ಸಂದರ್ಭದಲ್ಲಿ ನಡೆದ ಉಕ್ರೇನಿಯನ್ನರ ವಲಸೆ ಎರಡನೇ ಮಹಾಯುದ್ಧದ ಬಳಿಕ ಯುರೋಪಿನಲ್ಲೇ ಅತಿದೊಡ್ಡ ವಲಸೆ ಎನಿಸಿಕೊಂಡಿದೆ. ಎಂಟು ಮಿಲಿಯನ್‌ಗೂ ಹೆಚ್ಚಿನ ಜನರು ಈಗಾಗಲೇ ದೇಶ ತೊರೆದಿದ್ದಾರೆ. ಇವರಲ್ಲಿ ಹಲವರನ್ನು ರಷ್ಯಾ ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಿದೆ. ಉಳಿದ ಜನರು ಜರ್ಮನಿ, ಪೋಲ್ಯಾಂಡ್‌ಗಳ ಸಂಪನ್ಮೂಲಗಳಿಗೆ ಭಾರವಾಗಿ ಪರಿಣಮಿಸಿದ್ದು, ಶಿಕ್ಷಣ, ಆಸ್ಪತ್ರೆಗಳ ಸೇವೆಗಳಿಗೂ ಅವುಗಳನ್ನು ಅವಲಂಬಿಸಿದ್ದಾರೆ.

ಜಾಗತಿಕ ರಾಜಕಾರಣ:
ಯುರೋಪಿನಲ್ಲಿ ನಡೆಯುತ್ತಿರುವ ಪ್ರಸ್ತುತ ಕದನದಲ್ಲಿ ರಷ್ಯಾದಂತಹ ನ್ಯೂಕ್ಲಿಯರ್ ಶಕ್ತಿಯೂ ಭಾಗಿಯಾಗಿದೆ. ಇದರ ಪರಿಣಾಮವಾಗಿ, ಜಾಗತಿಕ ರಾಷ್ಟ್ರಗಳ ಮರುಜೋಡಣೆ ನಡೆಯುತ್ತಿದ್ದು, ಅದರೊಡನೆ ನ್ಯಾಟೋ, ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕಾಗಳಿಗೆ ಕಳವಳ ಮೂಡಿಸಿದೆ. ಈ ಯುದ್ಧದ ಕಾರಣದಿಂದ ರಾಜತಾಂತ್ರಿಕ ಸಂಬಂಧಗಳಲ್ಲಿ ಹೆಚ್ಚಿನ ತಳಮಳಗಳು ಉಂಟಾಗಿದೆ. ಉದಾಹರಣೆಗೆ, ನ್ಯಾಟೋ ಸದಸ್ಯ ರಾಷ್ಟ್ರವಾಗಿರುವ ಟರ್ಕಿ ಈಗ ರಷ್ಯಾದೊಡನೆ ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸಿದ್ದು, ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳನ್ನು ನ್ಯಾಟೋಗೆ ಸೇರ್ಪಡೆಗೊಳಿಸುವುದಕ್ಕೆ ತನ್ನ ವಿರೋಧ ವ್ಯಕ್ತಪಡಿಸುತ್ತಿದೆ.

ಶಕ್ತಿ ಸಂಪನ್ಮೂಲ: 
ರಷ್ಯಾ ಜಾಗತಿಕವಾಗಿ ಅತಿದೊಡ್ಡ ತೈಲ ಮತ್ತು ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಯುರೋಪಿನ ರಾಷ್ಟ್ರಗಳು ತೈಲ, ಅನಿಲ ಹಾಗೂ ಡೀಸೆಲ್‌ಗಾಗಿ ರಷ್ಯಾದ ಮೇಲೆ ಬಹುತೇಕ ಅವಲಂಬಿತವಾಗಿದ್ದವು. ಆರಂಭದಲ್ಲಿ ಯುದ್ಧದ ಪರಿಣಾಮವಾಗಿ ತೈಲ, ಅನಿಲಗಳ ಬೆಲೆ ಏರಿಕೆ ಕಂಡಿತ್ತು. ಆದರೆ ಯುರೋಪಿನ ರಾಷ್ಟ್ರಗಳು ಬದಲಿ ಇಂಧನ ಮೂಲಗಳಿಗಾಗಿ ಹುಡುಕಾಟ ನಡೆಸಿದ ಪರಿಣಾಮವಾಗಿ ಮತ್ತು ಈ ಬಾರಿಯ ಯುರೋಪಿನ ಚಳಿಗಾಲ ಸಾಕಷ್ಟು ಬೆಚ್ಚಗಿದ್ದ ಕಾರಣ ಬೆಲೆ ಏರಿಕೆ ನಿಯಂತ್ರಣದಲ್ಲಿತ್ತು. ಇವೆಲ್ಲ ಕಾರಣಗಳಿಂದ ಈಗ ಬೆಲೆಗಳು ಮರಳಿ ಯುದ್ಧಪೂರ್ವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ- Weird News: 9 ತಿಂಗಳು ಅಲ್ಲ 9 ವರ್ಷಗಳವರೆಗೆ ಗರ್ಭ ಧರಿಸಿದ ಮಹಿಳೆ, ನಂತರ ಆಗಿದ್ದೇನು ನೀವೇ ಓದಿ!

ಭದ್ರತೆ: 
ಎಲ್ಲ ದೇಶಗಳಿಗೆ ಹೋಲಿಸಿದರೆ, ರಷ್ಯಾದ ಬಳಿ ಅತಿಹೆಚ್ಚು ಅಣ್ವಸ್ತ್ರಗಳಿವೆ. ಉಕ್ರೇನ್ ಕುರಿತಾದ ರಷ್ಯಾದ ಆಕ್ರಮಣಕಾರಿ ವರ್ತನೆ ನ್ಯಾಟೋದಲ್ಲಿ‌ ಹೊಸ ಚೈತನ್ಯ ಮೂಡಿಸಿದೆ. ಆ ಕಾರಣದಿಂದ ಅಮೆರಿಕಾ ಮತ್ತು ಇತರ ನ್ಯಾಟೋ ಸದಸ್ಯ ರಾಷ್ಟ್ರಗಳು ಬಿಲಿಯನ್ ಗಟ್ಟಲೆ ಡಾಲರ್‌ಗಳನ್ನು ಉಕ್ರೇನಿಗಾಗಿ ಮಿಲಿಟರಿ ಉಪಕರಣಗಳನ್ನು ಖರೀದಿಸಲು ಮೀಸಲಿಟ್ಟಿವೆ. ಉಕ್ರೇನ್‌ಗೆ ಒದಗಿಸಿದ ಆರಂಭಿಕ ಮಿಲಿಟರಿ ಸಹಾಯದಲ್ಲಿ ಅಮೆರಿಕಾ ನಿರ್ಮಿತ ಆ್ಯಂಟಿ ಟ್ಯಾಂಕ್ ರಾಕೆಟ್‌ಗಳಾದ ಜಾವೆಲಿನ್‌ಗಳು ಪ್ರಮುಖವಾಗಿದ್ದವು. ಇತ್ತೀಚಿನ ಬೆಳವಣಿಗೆಯಲ್ಲಿ, ಜರ್ಮನಿ, ಬ್ರಿಟನ್ ಮತ್ತು ಅಮೆರಿಕಾಗಳು ಉಕ್ರೇನಿಗೆ ಆಧುನಿಕ ಟ್ಯಾಂಕ್‌ಗಳನ್ನು ಪೂರೈಸಲು ಸಿದ್ಧವಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News