ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಈ ಬಾರಿ 22 ಸೀಟುಗಳನ್ನು ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಖಾಡಕ್ಕೆ ಇಳಿದಿದೆ. ಕಳೆದ ವಾರವಷ್ಟೇ ಸಿಂಧನೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಇಂದು ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, 'ಮೋದಿ ವಿಜಯ ಸಂಕಲ್ಪ ಯಾತ್ರೆ'ಗೆ ಅವರು ದೇವನಹಳ್ಳಿಯಲ್ಲಿ ಚಾಲನೆ ನೀಡಲಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರ ಜೊತೆ ಅಮಿತ್ ಶಾ ಮೂರಕ್ಕೂ ಅಧಿಕ ಸಭೆಗಳನ್ನು ಅವರು ನಡೆಸಲಿದ್ದಾರೆ. ಜಿಲ್ಲಾ ಅಧ್ಯಕ್ಷರು, ರಾಜ್ಯ ಪದಾಧಿಕಾರಿಗಳ ಜೊತೆಯೂ ಸಭೆ ನಡೆಸಿ ಚುನಾವಣಾ ಸಿದ್ಧತೆಗಳ ಬಗ್ಗೆ ಸೂಚನೆಗಳನ್ನು ನೀಡಲಿದ್ದಾರೆ.
ಫೆಬ್ರವರಿ 21, 2019ರಂದು ಅಮಿತ್ ಶಾ ರ ರಾಜ್ಯ ಪ್ರವಾಸದ ವಿವರ:
- ಮಧ್ಯಾಹ್ನ 3:45ಕ್ಕೆ ದೇವನಹಳ್ಳಿಯ ಅನಂತ ವಿದ್ಯಾನಿಕೇತನದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಮಾವೇಶ.
- ಸಂಜೆ 5 ಗಂಟೆಗೆ ಯಲಹಂಕದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ರಾಜ್ಯ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರ ಸಭೆ.
- ಸಂಜೆ 7:15ಕ್ಕೆ ಲೋಕಸಭಾ ಚುನಾವಣೆ ಪ್ರಭಾರಿಗಳು, ಜಿಲ್ಲಾ ಅಧ್ಯಕ್ಷರು, ವಿಸ್ತಾರಕರು, ರಾಜ್ಯ ಪದಾಧಿಕಾರಿಗಳು, ಉಸ್ತುವಾರಿಗಳ ಸಭೆ.
ಫೆ.14 ರಂದು ಸಿಂಧನೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಕೆಲವು ಸೀಟುಗಳ ಅಂತರದಲ್ಲಿ ಸೋತೆವು. ಆದರೆ ಆ ಸೋಲು ಮುಂಬರುವ ಲೋಕಸಭಾ ಚುನಾವಣೆಗೆ ಗೆಲುವಿನ ಮುನ್ನುಡಿ ಬರೆಯುವ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಮಹಾ ಘಟಬಂಧನ ಗೆದ್ದರೆ ವಾರದಲ್ಲಿ 6 ಪ್ರಧಾನಿ, ಭಾನುವಾರ ದೇಶಕ್ಕೆ ರಜೆ ಎಂದು ಗುಡುಗಿದ್ದರು.