ಕಚ್: ಭಾರತ-ಪಾಕಿಸ್ತಾನ ನಡುವಿನ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದೇಶದ ಗಡಿ ಭಾಗಗಳಲ್ಲಿ, ಕಡಲ ತೀರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ಪ್ರಮುಖ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಳದಿಂದ ಗಡಿ ಭಾಗಗಳಲ್ಲಿ ಜನರ ಭೇಟಿ ನಿಷೇಧಿಸಲಾಗಿದೆ. ಗಡಿನಾಡಿನ ಎಲ್ಲಾ ನಾಗರಿಕ ಕಾರ್ಯಕ್ರಮಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಗಡಿ ಜಿಲ್ಲೆಗಳಲ್ಲಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್, ರಾಜಸ್ತಾನ, ಗುಜರಾತ್ ಗಡಿ ಭಾಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
"ಸಮುದ್ರ ಮತ್ತು ಭೂ ಗಡಿಗಳಲ್ಲಿ ಆಂತರಿಕ ಭದ್ರತೆಗಾಗಿ ಒಂದು ನಿರ್ದಿಷ್ಟ ಯೋಜನೆಯನ್ನು ತಯಾರಿಸಿ, ಸಶಸ್ತ್ರ ಪಡೆಗಳನ್ನು ಗಡಿಯಲ್ಲಿ ನಿಯೋಜಿಸಲಾಗಿದೆ." ಪ್ರಸ್ತುತ ಒತ್ತಡದಲ್ಲಿ ಗಡಿ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆ ತಲೆದೂರದಂತೆ ನಾವು ಎಚ್ಚರ ವಹಿಸಿದ್ದೇವೆ ಎಂದು ಇನ್ಸ್ಪೆಕ್ಟರ್ ಜನರಲ್ (ಗಡಿ ಪ್ರದೇಶ) ಹೇಳಿದರು.
ಭದ್ರತಾ ಸನ್ನಿವೇಶ ಕುರಿತು ಮೂರು ಸೇನೆಯ ಮುಖ್ಯಸ್ಥರನ್ನು ಭೇಟಿ ಮಾಡಿದ ಪ್ರಧಾನಿ:
ಪುಲ್ವಮಾ ದಾಳಿ, ಭಾರತದ ವಾಯುಪಡೆಯ ಏರ್ ಸ್ಟ್ರೈಕ್, ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ. ಹಲವಾರು ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸರಣಿ ಸಭೆಗಳನ್ನು ನಡೆಸಿದರು. ಸರಿಯಾದ ಸಮಯದಲ್ಲಿ ತಕ್ಕ ಉತ್ತರ ನೀಡಬೇಕು. ಭೂ, ವಾಯು ಮತ್ತು ನೌಕಾಪಡೆಗೆ ಸಂಪೂರ್ಣ ಸ್ವತಂತ್ರ ನೀಡಲಾಗಿದೆ. ಮುಂದಿನ ನಡೆಗಳ ಬಗ್ಗೆ ಅವರು ತೀರ್ಮಾನವನ್ನು ಕೈಗೊಳ್ಳಬಹುದು ಎಂದು ಮೂರು ಸೇನೆಗಳ ಮುಖ್ಯಸ್ಥರ ಜೊತೆ ನರೇಂದ್ರ ಮೋದಿ ಸರಣಿ ಸಭೆಗಳಲ್ಲಿ ತಿಳಿಸಲಾಗಿದೆ.