ಹೈದರಾಬಾದ್: ಆಟವಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯ ಬಾತ್ ರೂಂನಲ್ಲಿ ಬಿದ್ದ 7 ವರ್ಷದ ಬಾಲಕಿಯೊಬ್ಬಳು 5 ದಿನಗಳವರೆಗೆ ಕೇವಲ ನೀರನ್ನು ಕುಡಿದು ಬದುಕಿದ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್ ನಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ನಾರಾಯಣಪೇಟ್ ಜಿಲ್ಲೆಯ ಮಖ್ತಲ್ ಪಟ್ಟಣದಲ್ಲಿ ನಡೆದಿದೆ.
ಪ್ರವಾಸಕ್ಕೆ ತೆರಳಿದ್ದ ಪಕ್ಕದ ಮನೆಯವರು ಗುರುವಾರ ಮನೆಗ ಮರಳಿದ ಬಳಿಕ ತಮ್ಮ ಬಾತ್ ರೂಂನಲ್ಲಿ ಬಾಲಕಿಯೊಬ್ಬಳು ಮಲಗಿರುವ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡು ಆತಂಕಗೊಂಡಿದ್ದಾರೆ. ಆಕೆ ಐದು ದಿನಗಳಿಂದ ಯಾವುದೇ ಆಹಾರವಿಲ್ಲದೆ, ಅಲ್ಲಿದ್ದ ನೀರನ್ನು ಮಾತ್ರ ಕುಡಿದು ಬದುಕಿದ್ದು, ತೀವ್ರ ಅಸ್ವಸ್ಥಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 20 ರಂದು ಪಕ್ಕದ ಮನೆಯ ಟೆರೇಸ್ ನಲ್ಲಿ ಆಟ ಆಡುವಾಗ ಆಡುವಾಗ ಕುರವಾಕಚೇರಿ ಅಖಿಲಾ ಎಂಬ 2ನೇ ತರಗತಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಮನೆಯ ಬಾತ್ ರೂಂಗೆ ಬಿದ್ದಿದ್ದಳು ಎಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಮೇಲ್ಛಾವಣಿಯು ಪ್ಲ್ಯಾಸ್ಟಿಕ್ ನೆಟ್ ನಿಂದ ಮುಚ್ಚಲ್ಪಟ್ಟಿದ್ದರಿಂದ ಆಕೆ ಬಾತ್ ರೂಂ ಒಳಗೆ ಬಿದ್ದಿದ್ದಳು. ಆದರೆ ಯಾವುದೇ ಗಾಯಗಳಾಗಿಲ್ಲ. ಅಸ್ವಸ್ಥವಾಗಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ ಬಾತ್ ರೂಂ ಬಾಗಿಲು ಹೊರಗಿನಿಂದ ಲಾಕ್ ಆಗಿದ್ದರಿಂದ ಬಾಲಕಿ ಹೊರಗೆ ಬರಲು ಸಾಧ್ಯವಾಗದೆ ಸಹಾಯಕಾಗಿ ಕುಗಿದ್ದಾಳೆ, ಅತ್ತಿದ್ದಾಳೆ. ಆದರೆ, ಆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಆಕೆಯ ಕೂಗಿಗೆ ಯಾರೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ಎಲ್ಲೂ ಕಾಣದ ಕಾರಣ ಆಕೆಯ ಪೋಷಕರಾದ ಸುರೇಶ್ ಮತ್ತು ಮಹಾದೇವಮ್ಮ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಪೋಲಿಸ್ ಸಬ್ ಇನ್ಸ್ಪೆಕ್ಟರ್ ಬಿ. ಅಶೋಕ್ ಕುಮಾರ್ ಹೇಳುವಂತೆ, ಪೋಷಕರು ಸ್ಥಳೀಯ ಜಾತ್ರಯಲ್ಲಿ ತಮ್ಮ ಮಗಳು ಕಳೆದುಹೋಗಿದ್ದಾಳೆ ಎಂದು ತಿಳಿಸಿದ್ದರು ಎಂದಿದ್ದಾರೆ.