ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 'ಬರ' ಗ್ಯಾರಂಟಿ ಖಚಿತ ಮತ್ತು ನಿಶ್ಚಿತ: ಬಿಜೆಪಿ

ಮಲೆನಾಡಿನಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದರೆ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ತಿರುಗಿದೆ ಎಂಬುದು ಅರ್ಥವಾಗುತ್ತದೆ. ಆದರೆ ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕಾಗಿದ್ದ ರಾಜ್ಯ ಸರ್ಕಾರ ಸಂಪೂರ್ಣ "ಕುರುಡ-ಕಿವುಡ-ಮೂಗ"ನಂತೆ ವರ್ತಿಸುತ್ತಿರುವುದು ಮಾತ್ರ ನಿಜಕ್ಕೂ ನಾಚಿಕೆಗೇಡು ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Sep 13, 2023, 03:38 PM IST
  • ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ "ಬರ" ಎಂಬ ಗ್ಯಾರಂಟಿ ಖಚಿತ ಮತ್ತು ನಿಶ್ಚಿತ
  • ಕಾಂಗ್ರೆಸ್ ರಾಜ್ಯವನ್ನು ಆಳಿದ ಅವಧಿಯ ಬಹುಪಾಲು ರಾಜ್ಯವು ಬರಪೀಡಿತವಾಗಿತ್ತು
  • ಈ ಬಾರಿ ತುಸು ಹೆಚ್ಚು ಎಂಬಂತೆ ಬರದ ಕರಿಛಾಯೆ, ರಾಜ್ಯದ ಜನತೆಯ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 'ಬರ' ಗ್ಯಾರಂಟಿ ಖಚಿತ ಮತ್ತು ನಿಶ್ಚಿತ: ಬಿಜೆಪಿ title=
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ "ಬರ" ಎಂಬ ಗ್ಯಾರಂಟಿ ಖಚಿತ ಮತ್ತು ನಿಶ್ಚಿತವೆಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ರಾಜ್ಯವನ್ನು ಆಳಿದ ಅವಧಿಯ ಬಹುಪಾಲು ರಾಜ್ಯ ಬರಪೀಡಿತವಾಗಿತ್ತು. ಆದರೆ ಈ ಬಾರಿ ತುಸು ಹೆಚ್ಚೇ ಎಂಬಂತೆ ಬರದ ಕರಿಛಾಯೆ, ರಾಜ್ಯದ ಜನತೆಯ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ’ ಎಂದು ಕಿಡಿಕಾರಿದೆ. ‘ಕಳೆದ ವರ್ಷ ಇದೇ ಸಮಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಾಗಿರುವ ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಕೆರೆಕಟ್ಟೆಗಳು ತುಂಬಿ ಕೋಡಿ ಹರಿದಿದ್ದವು. ಆದರೆ ಈ ವರ್ಷ ಅತಿಹೆಚ್ಚು ಮಳೆ ಬೀಳುವ ಮಲೆನಾಡು ಸಹ ಬರಗಾಲದ ನಾಡಾಗಿದೆ. ಕಳೆದ ವರ್ಷ ತುಂಬಿ ತುಳುಕುತ್ತಿದ್ದ ಜಲಾಶಯಗಳು ಒಂದೆರೆಡು ತಿಂಗಳಲ್ಲಿ ಬರಿದಾಗುವ ಹಂತ ತಲುಪಿವೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಮಳೆನಾಡಿನಂತಹ ಮಲೆನಾಡಿನಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದರೆ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ತಿರುಗಿದೆ ಎಂಬುದು ಅರ್ಥವಾಗುತ್ತದೆ. ಆದರೆ ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕಾಗಿದ್ದ ರಾಜ್ಯ ಸರ್ಕಾರ ಸಂಪೂರ್ಣ "ಕುರುಡ-ಕಿವುಡ-ಮೂಗ"ನಂತೆ ವರ್ತಿಸುತ್ತಿರುವುದು ಮಾತ್ರ ನಿಜಕ್ಕೂ ನಾಚಿಕೆಗೇಡು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 196 ತಾಲೂಕುಗಳು ಬರಪೀಡಿತವಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈ ತಿಂಗಳ ಅಂತ್ಯದ ವೇಳೆಗೆ ಬರಪೀಡಿತ ತಾಲೂಕುಗಳ ಸಂಖ್ಯೆ 210 ದಾಟಿದರೂ ಅಚ್ಚರಿಯಿಲ್ಲ. ವಿಪರ್ಯಾಸವೆಂದರೆ ರಾಜ್ಯದಲ್ಲಿರುವ ಒಟ್ಟು ತಾಲೂಕುಗಳ ಸಂಖ್ಯೆ 233. ರಾಜ್ಯದ ಶೇ.90ಕ್ಕೂ ಹೆಚ್ಚು ಪ್ರದೇಶ ಬರಪೀಡಿತವಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಈ ರೀತಿಯ ಬರ ವ್ಯಾಪಿಸಿರುವುದು ಇದೇ ಮೊದಲು’ ಎಂದು ಬಿಜೆಪಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಸೈಬರ್ ಅಪರಾಧ ತಡೆಗೆ ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು ಅಗತ್ಯ: ಸಿಎಂ ಸಿದ್ದರಾಮಯ್ಯ

‘ಪರಿಸ್ಥಿತಿ ಇಷ್ಟರ ಮಟ್ಟಿಗೆ ಕೈ ಮೀರಿದರೂ, ರಾಜ್ಯದ "ಕೈ" ಸರ್ಕಾರ  ಬರ ಘೋಷಿಸಲು ಮೀನಾಮೇಷ ಎಣಿಸುತ್ತಾ, ಒಳಜಗಳದಲ್ಲಿ ನಿರತವಾಗಿ, ರಾಜ್ಯದ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಬರದ ನೇರ ಪರಿಣಾಮ ಮೊದಲು ಬೀಳುವುದೇ ನಾಡಿನ ನೇಗಿಲಯೋಗಿಗಳ ಮೇಲೆ.  ಸಿದ್ದರಾಮಯ್ಯರವರ ಮೊದಲ ಸರ್ಕಾರದ ಅವಧಿಯಲ್ಲಿ (2013-2018) ರಾಜ್ಯದಲ್ಲಿ ಬರ ವ್ಯಾಪಕವಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಬರದ ಬೇಜವಾಬ್ದಾರಿ ನಿರ್ವಹಣೆ ಹಾಗೂ ರೈತ ವಿರೋಧಿ ನೀತಿಯಿಂದ ಒಟ್ಟು 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಸಿದ್ದರಾಮಯ್ಯರವರ ಸರ್ಕಾರ ರೈತರ ಆತ್ಮಹತ್ಯೆಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಿತ್ತು’ ಎಂದು ಬಿಜೆಪಿ ಟೀಕಿಸಿದೆ.

‘ಸಿದ್ದರಾಮಯ್ಯರವರ ಈ 3 ತಿಂಗಳ ಸರ್ಕಾರದ ಅವಧಿಯಲ್ಲಿ ಈಗಾಗಲೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗಳನ್ನು ಲೇವಡಿ ಮಾಡುವಷ್ಟು ಸೊಕ್ಕು ಸಿದ್ದರಾಮಯ್ಯರವರ ಸಂಪುಟದ ಸಚಿವರಿಗೆ ಬಂದಿದೆ. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಅವೆರಡೂ ಇಲ್ಲವಾದರೆ ಬೆಲೆ ಕುಸಿತ. ಹೀಗಿದೆ ನಮ್ಮ ರೈತನ ಬದುಕು. ನಮಗೆ ಸರಿಯಾಗಿ ಬೆಳೆ ಬಂದು, ಆ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕರೆ ನಾವು ಸರ್ಕಾರಕ್ಕೆ ಬೇಕಿದ್ದರೆ ಸಾಲ ಕೊಡುತ್ತೇವೆಂಬ ಸ್ವಾಭಿಮಾನಿ ರೈತರ ಜೀವನ ಈಗ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗುತ್ತಿದೆ. ರೈತರ ಜೀವನ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಬಾರದೆಂಬ ಕಾರಣಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ₹4000 ನೀಡುತ್ತಿದ್ದ ಬಿಜೆಪಿ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದುಕೊಂಡಿದೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಸರ್ವಪಕ್ಷ ಸಭೆ :ತಮಿಳುನಾಡಿಗೆ ಕಾವೇರಿ ಬಿಡದಿರಲು ನಿರ್ಧಾರ!

‘ಕೇವಲ ಇದೊಂದೇ ಅಲ್ಲ, ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸುತ್ತಿದ್ದ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಾದ ಭೂ ಚೇತನ, ಭೂ ಸಿರಿ, ರೈತ ಶಕ್ತಿ, ರೈತ ವಿದ್ಯಾನಿಧಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿದಂತೆ ಹಲವಾರು ಯೋಜನೆಗಳನ್ನು ರಾಜಕೀಯ ದ್ವೇಷಕ್ಕಾಗಿ ವಾಪಸ್ ಪಡೆದಿದೆ. ಇದು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯ ಸ್ಪಷ್ಟ ನಿದರ್ಶನ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ರಾಜ್ಯದಲ್ಲಿ ಬರ ಘೋಷಿಸಿ, ಬರ ಪರಿಹಾರದ ಕ್ರಮಗಳನ್ನು ಸಾಗರೋಪಾದಿಯಲ್ಲಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದೆ’ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News