ಛತ್ತೀಸ್​ಗಢದಲ್ಲಿ ನಕ್ಸಲರ ಬೆದರಿಕೆಯಿಂದ ಮುಚ್ಚಿದ್ದ ಶಾಲೆಗೆ 14 ವರ್ಷಗಳ ಬಳಿಕ ಮರುಜೀವ!

2005-06ರಲ್ಲಿ, ಜನರು ಮಾವೋವಾದಿಗಳ ವಿರುದ್ಧ ದಂಗೆ ಎದ್ದಾಗ, ಬಿಜಾಪುರ ಜಿಲ್ಲೆಯ ಪದ್ಮೂರ್ ಗ್ರಾಮವನ್ನು ನಕ್ಸಲರು ಗುರಿಯಾಗಿಸಿಕೊಂಡರು. 

Last Updated : Jul 26, 2019, 10:10 AM IST
ಛತ್ತೀಸ್​ಗಢದಲ್ಲಿ ನಕ್ಸಲರ ಬೆದರಿಕೆಯಿಂದ ಮುಚ್ಚಿದ್ದ ಶಾಲೆಗೆ 14 ವರ್ಷಗಳ ಬಳಿಕ ಮರುಜೀವ! title=
Pic Courtesy: ANI

ಬಿಜಾಪುರ್ (ಛತ್ತೀಸ್​ಗಢ): ನಕ್ಸಲ್ ಪೀಡಿತ ಪದ್ಮೂರ್ ಗ್ರಾಮದಲ್ಲಿ  ನಕ್ಸಲರ ಬೆದರಿಕೆಯಿಂದಾಗಿ ಮುಚ್ಚಲ್ಪಟ್ಟಿದ್ದ ಪ್ರಾಥಮಿಕ ಶಾಲೆಗೆ 14 ವರ್ಷಗಳ ನಂತರ ಮರುಜೀವ ಬಂದಿದ್ದು, ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿ ಈ ಶಾಲೆಯನ್ನು ತೆರೆಯಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.

2005-06ರಲ್ಲಿ, ಜನರು ಮಾವೋವಾದಿಗಳ ವಿರುದ್ಧ ದಂಗೆ ಎದ್ದಾಗ, ಬಿಜಾಪುರ ಜಿಲ್ಲೆಯ ಪದ್ಮೂರ್ ಗ್ರಾಮವನ್ನು ನಕ್ಸಲರು ಗುರಿಯಾಗಿಸಿಕೊಂಡರು. ಇದಾದ ನಂತರ ಗ್ರಾಮಸ್ಥರು ಗ್ರಾಮವನ್ನು ತೊರೆದಿದ್ದರು. ಆ ಸಂದರ್ಭದಲ್ಲಿ 1964 ರಿಂದ ನಡೆಯುತ್ತಿದ್ದ ಶಾಲೆಯನ್ನು ಮಾವೋವಾದಿಗಳು ನಾಶಪಡಿಸಿದರು.

2012 ರಲ್ಲಿ, ಗ್ರಾಮಸ್ಥರು ಗ್ರಾಮಕ್ಕೆ ಹಿಂದಿರುಗಿದರಾದರೂ ಮಕ್ಕಳ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿ ಅವರನ್ನು ಕಾಡುತ್ತಲೇ ಇತ್ತು. ಇದೀಗ ದಶಕಗಳ ಬಳಿಕ ಶಿಕ್ಷಣ ಇಲಾಖೆ ಅಂತಿಮವಾಗಿ ಶಾಲೆಯನ್ನು ಮತ್ತೆ ತೆರೆಯಲು ನಿರ್ಧರಿಸಿತು.

ಬುಧವಾರ, ಗ್ರಾಮದ ಮುಖ್ಯಸ್ಥ ಗೊಂಡೆ ಸೋಮು ಮತ್ತು ಗಂಗಲೂರಿನ "ಸರ್ಪಂಚ್", ಮಂಗಲ್ ರಾಣಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಗ್ರಾಮದಲ್ಲಿ ಶಾಲೆಯನ್ನು ಮತ್ತೆ ತೆರೆದರು.

ಗ್ರಾಮದ ಸುತ್ತಮುತ್ತಲಿನ ಮಕ್ಕಳಿಗೆ ಶಿಕ್ಷಣವನ್ನು ಸುಲಭಗೊಳಿಸುವ ಸಲುವಾಗಿ ಅಧಿಕಾರಿಗಳು ಭುಜದ ಮೇಲೆ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಹೊತ್ತು ಕಾಲ್ನಡಿಗೆಯಲ್ಲಿ ನದಿಯನ್ನು ದಾಟಿದರು. ಇನ್ನ್ದು ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಗ್ರಾಮಸ್ಥರ ಸಂತಸಕ್ಕೆ ಎಲ್ಲೆಯೇ ಇಲ್ಲದಂತಾಗಿದ್ದು, ಶಾಲೆಯ ತುಂಬೆಲ್ಲಾ ಬಲೂನ್ ಗಳನ್ನು ಕಟ್ಟಿ ಅಭಿವೃದ್ಧಿಯ ಸಂಕೇತವಾದ ಶಾಲಾ ಮರು ಉದ್ಘಾಟನೆಯನ್ನು ಸಂಭ್ರಮದಿಂದ ಆಚರಿಸಿದರು.

ಬುಧವಾರವಷ್ಟೇ ತೆರೆಯಲಾಗಿರುವ ಶಾಲೆಗೆ ಈವರೆಗೂ 52 ಮಕ್ಕಳು ಪ್ರವೇಶ ಪಡೆದರು. ಔಪಚಾರಿಕವಾಗಿ ಶಾಲೆ ತೆರೆದ ನಂತರ ಅವರಿಗೆ ಪುಸ್ತಕಗಳು, ನೋಟ್ಬುಕ್ಗಳು, ಇತರ ಶೈಕ್ಷಣಿಕ ಸಾಮಗ್ರಿಗಳು ಮತ್ತು ಕೆಲವು ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಅಷ್ಟೇ ಅಲ್ಲದೆ ಅಂದಿನಿಂದಲೇ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

14 ವರ್ಷಗಳ ನಂತರ ಶಾಲೆ ಮತ್ತೆ ತೆರೆಯಲ್ಪಟ್ಟಿದ್ದರಿಂದ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ಸೋಮು ಹೇಳಿದರು. 

"ಕಳೆದ ಹಲವಾರು ವರ್ಷಗಳಿಂದ, ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ, ಈಗ ಶಾಲೆ ಪುನರಾರಂಭಗೊಳ್ಳುವುದರಿಂದ, ಗ್ರಾಮದಲ್ಲಿ ಶಿಕ್ಷಣವು ಹೊಸ ಸ್ಥಾನಮಾನವನ್ನು ಪಡೆಯುತ್ತದೆ" ಎಂದು ಅವರು ಅಭಿಪ್ರಾಯ ಪಟ್ಟರು.

ಶಾಲೆಯ ಪುನರಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ಲಾಕ್ ಎಜುಕೇಶನ್ ಆಫೀಸರ್ ಮೊಹಮ್ಮದ್ ಆಕಿರ್ ಖಾನ್, ಇದು ಶಿಕ್ಷಣ ಸೌಲಭ್ಯವಿಲ್ಲದ ಎಲ್ಲಾ ಗ್ರಾಮಗಳಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದರು.

ಕುಡ್ಡರ್, ಗುಂಡಾಪುರ, ಜಪೆಲಿ, ದುರ್ದಾ, ಮೊಸಲಾ ಮತ್ತು ಗುಮ್ರಾಕ್ಸ್ ಶಾಲೆಗಳನ್ನು ಪುನಃ ತೆರೆಯುವಲ್ಲಿ ಖಾನ್ ಈ ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು.
 

Trending News