ರಾಜಸ್ಥಾನ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಎಲ್ಲಾ 6 ಬಿಎಸ್​ಪಿ ಶಾಸಕರು ಕಾಂಗ್ರೆಸ್‌ಗೆ!

ಸೋಮವಾರ ತಡರಾತ್ರಿ ರಾಜಸ್ಥಾನದಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಬಿಎಸ್​ಪಿಯ ಎಲ್ಲಾ 6 ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 

Last Updated : Sep 17, 2019, 08:02 AM IST
ರಾಜಸ್ಥಾನ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಎಲ್ಲಾ 6 ಬಿಎಸ್​ಪಿ ಶಾಸಕರು ಕಾಂಗ್ರೆಸ್‌ಗೆ! title=

ಜೈಪುರ: ಸೋಮವಾರ ತಡರಾತ್ರಿ ರಾಜಸ್ಥಾನದಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಬಿಎಸ್​ಪಿಯ ಎಲ್ಲಾ 6 ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಸಂಪೂರ್ಣ ಬಹುಮತ ದೊರೆತಂತಾಗಿದೆ.

ಬಿಎಸ್​ಪಿ ನಾಯಕ ಜೋಂಗಿದಾರ್ ಅವನಾ ಸೇರಿದಂತೆ ಎಲ್ಲ ಶಾಸಕರು ಬಿಎಸ್​ಪಿ ತೊರೆದು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿದ್ದಾರೆ. ಶಾಸಕರು ತಮ್ಮ ವಿಲೀನ ಪತ್ರವನ್ನು ವಿಧಾನಸಭೆಯ ಸ್ಪೀಕರ್ ಡಾ.ಸಿ.ಪಿ ಜೋಶಿ ಅವರಿಗೆ ಸಲ್ಲಿಸಿದರು.

ಎಲ್ಲಾ ಬಿಎಸ್​ಪಿ ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೀ ಮೀಡಿಯಾಕ್ಕೆ ಫೋನ್‌ನಲ್ಲಿ ಮಾಹಿತಿ ನೀಡಿದರು. ರಾಜಸ್ಥಾನದ ಜನರ ಹಿತದೃಷ್ಟಿಯಿಂದ ಬಿಎಸ್​ಪಿ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲಾ ಶಾಸಕರು ಅಭಿವೃದ್ಧಿ ಪರದ ಸರ್ಕಾರಕ್ಕೆ ಸಾಥ್ ನೀಡಿದ್ದಾರೆ ಎಂದು ಅವರು ತಿಳಿಸಿದರು.

ವಾಸ್ತವವಾಗಿ, 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳು, ಬಿಜೆಪಿ 73 ಮತ್ತು ಬಿಎಸ್​ಪಿ 6 ಸ್ಥಾನಗಳನ್ನು ಪಡೆದುಕೊಂಡಿದೆ. ಇದೀಗ ಬಿಎಸ್​ಪಿಯ 6 ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನಗೊಂಡ ಬಳಿಕ ಗೆಹ್ಲೋಟ್ ಸರ್ಕಾರಕ್ಕೆ ಪೂರ್ಣ ಬಹುಮತ ದೊರೆತಂತಾಗಿದ್ದು, ಸರ್ಕಾರ ಸುಭದ್ರವಾಗಿದೆ ಎಂಬ ಸಂದೇಶ ರವಾನೆಯಾಗಿದೆ.

ಪಂಚಾಯತ್ ಚುನಾವಣೆಗಳ ಮೊದಲು ಕಾಂಗ್ರೆಸ್ ತನ್ನ ಸರ್ಕಾರವನ್ನು ಮತ್ತು ಪಕ್ಷವನ್ನು ಬಲಪಡಿಸಿದೆ. ಈ ಬಾರಿ ಕಾಂಗ್ರೆಸ್ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮತ್ತೊಂದೆಡೆ, ಇದು ಬಿಎಸ್​ಪಿಗೆ ದೊಡ್ಡ ಹಿನ್ನಡೆಯಾಗಿದೆ. ಬಿಎಸ್​ಪಿ ಶಾಸಕರು ಕಾಂಗ್ರೆಸ್ ಸೇರುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2008 ರಲ್ಲಿ ಆರು ಬಿಎಸ್​ಪಿ ಶಾಸಕರು ಕಾಂಗ್ರೆಸ್ ಸೇರಿದ್ದರು. ಕಾಕತಾಳೀಯವಾಗಿ ಆಗಲೂ ಸಹ ಅಶೋಕ್ ಗೆಹ್ಲೋಟ್ ಅವರೇ ಮುಖ್ಯಮಂತ್ರಿಯಾಗಿದ್ದರು.

Trending News