ನವದೆಹಲಿ: ಹೆಚ್ಚುತ್ತಿರುವ ಉಳ್ಳಾಗಡ್ಡಿ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ತಕ್ಷಣ ಪರಿಣಾಮದಿಂದ ರಪ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ದೇಶದಲ್ಲಿ ಉಳ್ಳಾಗಡ್ಡಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾದ ನಂತರ ಪೂರೈಕೆಯ ಕೊರತೆಯಿಂದಾಗಿ ಕಳೆದ ಕೆಲವು ವಾರಗಳಲ್ಲಿ ಉಳ್ಳಾಗಡ್ಡಿ ಬೆಲೆ 300% ಕ್ಕಿಂತ ಹೆಚ್ಚಾಗಿದೆ.
ಕಳೆದ ವಾರ ದೆಹಲಿ ಮತ್ತು ದೇಶದ ಹಲವಾರು ಭಾಗಗಳಲ್ಲಿ ಉಳ್ಳಾಗಡ್ಡಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು 70-80 ರೂಗಳಿಗೆ ಮಾರಾಟವಾಗುತ್ತಿತ್ತು. ಮುಂಬೈ ಮತ್ತು ಲಕ್ನೋ ಮುಂತಾದ ನಗರಗಳಲ್ಲಿ ಅದರ ಬೆಲೆ ಕೆ.ಜಿ.ಗೆ ಸುಮಾರು 60 ರೂ.ಗಳಷ್ಟಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸರ್ಕಾರವು ಉಳ್ಳಾಗಡ್ಡಿಯನ್ನು ಕೆ.ಜಿ.ಗೆ 23.90 ರೂ.ಗೆ ದೆಹಲಿಯಲ್ಲಿ ನೀಡುವುದಾಗಿ ಪ್ರಕಟಿಸಿದೆ. ಸೆಪ್ಟೆಂಬರ್ 26 ರಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರದಿಂದ ಉಳ್ಳಾಗಡ್ಡಿ ಖರೀದಿಸುವಂತೆ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದರು.
'ಮಾರುಕಟ್ಟೆಗಳಿಗೆ ಉಳ್ಳಾಗಡ್ಡಿ ಸರಬರಾಜನ್ನು ಹೆಚ್ಚಿಸಲು, ಉಳ್ಳಾಗಡ್ಡಿಯ ಲಭ್ಯತೆಯನ್ನು ನಿರ್ಣಯಿಸಲು ಮತ್ತು ಹೆಚ್ಚಿನ ಉಳ್ಳಾಗಡ್ಡಿಯನ್ನು ಮಾರುಕಟ್ಟೆಗೆ ತರಲು ರೈತರು, ವ್ಯಾಪಾರಿಗಳು ಮತ್ತು ಸಾಗಣೆದಾರರೊಂದಿಗೆ ಮಾತನಾಡಲು ಇಬ್ಬರು ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ' ಎಂದು ಪಾಸ್ವಾನ್ ಟ್ವೀಟ್ ಮಾಡಿದ್ದರು.