ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆ ಮತ್ತು ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಿಗೆ ಸ್ಪಂದಿಸಲು ಸುಪ್ರೀಂಕೋರ್ಟ್ ಮಂಗಳವಾರದಂದು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿತು.
ಐದು ನ್ಯಾಯಾಧೀಶರ ಸಂವಿಧಾನ ಪೀಠವು 370 ನೇ ವಿಧಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನವೆಂಬರ್ 14 ಕ್ಕೆ ಮುಂದೂಡಿತು.ಆದಾಗ್ಯೂ ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಗಡುವು ಅಕ್ಟೋಬರ್ 31ಕ್ಕೆ ಕೊನೆಗೊಳ್ಳುತ್ತದೆ.
ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸಂಜಯ್ ಕಿಶನ್ ಕೌಲ್, ಆರ್.ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅರ್ಜಿದಾರರು ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಸಲ್ಲಿಸಿದ ಅಫಿಡವಿಟ್ಗೆ ಸ್ಪಂದಿಸಲು ಕೇಂದ್ರಕ್ಕೆ ಸಾಕಷ್ಟು ಸಮಯವನ್ನು ನೀಡುತ್ತದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಯ ನಿಬಂಧನೆಗಳನ್ನು ರದ್ದುಗೊಳಿಸುವ ಕುರಿತು ಕೇಂದ್ರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವ ಮತ್ತು ನಂತರದ ರಾಷ್ಟ್ರಪತಿ ಆದೇಶಗಳನ್ನು ಈ ಅರ್ಜಿಗಳು ಪ್ರಶ್ನಿಸಿವೆ. ಈ ಅರ್ಜಿಗಳು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ಗಳಾಗಿ ವಿಭಜಿಸುವುದನ್ನು ಪ್ರಶ್ನಿಸಿವೆ.
ಕೇಂದ್ರವು ತನ್ನ ಪ್ರತಿಕ್ರಿಯೆ ನೀಡಿದ ನಂತರ ಅರ್ಜಿದಾರಿಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಸಿಗುತ್ತದೆ.ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಮನವಿ ಮಾಡಿದರು, ಇದನ್ನು ಅರ್ಜಿದಾರರು ಮತ್ತು ಅವರ ವಕೀಲ ರಾಜು ರಾಮಚಂದ್ರನ್ ವಿರೋಧಿಸಿದರು. ಅಕ್ಟೋಬರ್ 31 ರಿಂದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ ಪರಿಣಾಮಕಾರಿಯಾಗಲಿದೆ ಎಂದು ಅವರು ಪ್ರಸ್ತಾಪಿಸಿದರು.