ಮಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆದಿದೆಯೇ ಎಂಬುದು ಆದಾಯ ತೆರಿಗೆ ಇಲಾಖೆ ವಿಚಾರಣೆ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಳಿ ನಡೆದ ಬಳಿಕ ಸೀಟು ಹಂಚಿಕೆ ಹಗರಣಕ್ಕೆ ಸಂಬಧಿಸಿದಂತೆ ಈ ದಾಳಿ ನಡೆದಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಮಂಗಳೂರಿನಲ್ಲಿ ಶುಕ್ರವಾರ ಸಚಿವರು ಈ ಪ್ರತಿಕ್ರಿಯಿಸಿದರು.
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ವೈದ್ಯಕೀಯ ಕಾಲೇಜುಗಳ ನಡುವೆ ಇರುವ ಒಪ್ಪಂದದಲ್ಲಿ ಸೀಟ್ ಬ್ಲಾಕಿಂಗ್ಗೆ ಅವಕಾಶವಿದೆ. ಸೀಟ್ ಬ್ಲಾಕಿಂಗ್ ಬಗ್ಗೆ ದೂರು, ಆರೋಪಗಳಿದ್ದರೂ ಒಪ್ಪಂದದಲ್ಲೇ ಅವಕಾಶ ಇರುವ ಕಾರಣ ತಪ್ಪಾಗಿದೆ ಅಥವಾ ಸೀಟು ಬ್ಲಾಕಿಂಗ್ ಅವಕಾಶವನ್ನು ದುರ್ಬಳಕೆ ಆಗಿದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಐಟಿ ಇಲಾಖೆ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ಗೊತ್ತಾಗಬೇಕಾಗಿದೆ ಎಂದರು.
"ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿವೆ. ಈ ಸೀಟುಗಳು ಭರ್ತಿಯಾಗದೇ ಇದ್ದಾಗ ಅವುಗಳನ್ನು ಸಂಬಂಧಿಸಿದ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ. ಅದನ್ನು ಕೆಲವು ಶಿಕ್ಷಣ ಸಂಸ್ಥೆಗಳು ದುರುಪಯೋಗಪಡಿಸಿಕೊಂಡಿವೆ ಎಂಬುದು ಆರೋಪ. ಆದರೆ, ಡಾ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲಿನ ಆರೋಪಗಳ ಬಗ್ಗೆ ಇದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅಘೋಷಿತ ಆಸ್ತಿ, ಅಕ್ರಮ ಹಣ ಹಾಗೂ ಕಪ್ಪು ಹಣ ವಿಚಾರದಲ್ಲಿ ಐಟಿ ದಾಳಿಯಾಗಿದೆ. ಅದನ್ನು ಶಿಕ್ಷಣ ಸಂಸ್ಥೆ ಯಾವ ಮೂಲದಿಂದ ಸಂಗ್ರಹಿಸಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು.
"ಸಾಮಾನ್ಯವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ಮ್ಯಾನೇಜ್ ಮೆಂಟ್ ಹಾಗೂ ಎನ್ಆರ್ಐ ಸೀಟ್ಗಳ ಶುಲ್ಕದಲ್ಲಿ ಅವ್ಯವಹಾರ ನಡೆದಿದ್ದರೆ ಈ ರೀತಿಯ ದಾಳಿ ನಡೆಯುತ್ತದೆ. ಇದೀಗ ಸೀಟ್ ಬ್ಲಾಕಿಂಗ್ ದಂಧೆಯ ಬಗ್ಗೆಯೂ ಆರೋಪ ಕೇಳಿಬಂದಿದೆ. ಈ ಬಗ್ಗೆ ಐಟಿ ತನಿಖೆ ಹೆಚ್ಚಿನ ಬೆಳಕು ಚೆಲ್ಲಲಿದೆ. ಆ ಬಳಿಕ ಸರ್ಕಾರ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುವುದು" ಎಂದು ಡಿಸಿಎಂ ತಿಳಿಸಿದರು.
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಆದ್ದರಿಂದ ಹೊಸ ಯೋಜನೆಗಳು ಇಲ್ಲ ಎಂಬ ಬಿ.ಸಿ.ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ರೈತರ ಸಾಲ ಮನ್ನಾ ಯೋಜನೆಗೆ 40 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಹಿಂದಿನ ಸರ್ಕಾರ 15 ಸಾವಿರ ಕೋಟಿ ಖರ್ಚುಮಾಡಿದ್ದು, ಅದರಲ್ಲಿ ಸ್ವಲ್ಪ ಬಾಕಿ ಇನ್ನೂ ಜಮಾ ಮಾಡುವುದಿದೆ. ಇದರೊಂದಿಗೆ ಅತಿವೃಷ್ಠಿ, ಅನಾವೃಷ್ಠಿಗಳಿಗೆ ಪರಿಹಾರವನ್ನೂ ಒದಗಿಸಬೇಕಾಗುತ್ತದೆ. ಹಳೆಯ ಬಜೆಟ್ ನಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಹಣ ಹೊಂದಾಣಿಕೆ ಕಷ್ಟ. ಅದಕ್ಕಾಗಿ ಹೊಸ ಯೋಜನೆಗಳನ್ನು ಘೋಷಿಸುತ್ತಿಲ್ಲ. ಮುಂದಿನ ಬಜೆಟ್ ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಲಾಗುವುದು" ಎಂದರು.
ರೈತರ ಸಾಲ ಮನ್ನಾ ಕುರಿತಂತೆ ಗೊಂದಲಗಳಿರುವ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, "ಸಾಲ ಮನ್ನಾಕ್ಕೆ ಕೆಲವು ಪ್ರಕ್ರಿಯೆಗಳಿರುತ್ತವೆ. ಅಗತ್ಯ ದಾಖಲೆಗಳನ್ನು ಒದಗಿಸಿದ ಬಳಿಕ ಸಾಲ ಮನ್ನಾ ಆಗಬೇಕಾಗುತ್ತದೆ. ಹೀಗಾಗಿ ಕೆಲವು ಲೋಪಗಳು ಆಗಿರಬಹುದು. ಅದೆಲ್ಲವನ್ನೂ ಸರಿಪಡಿಸಿ ಯಾರ್ಯಾರು ಯೋಜನೆ ವ್ಯಾಪ್ತಿಗೆ ಬರುತ್ತಾರೋ ಅವರೆಲ್ಲರ ಸಾಲ ಮನ್ನಾ ಮಾಡಲು ಸರ್ಕಾರ ಬದ್ಧವಾಗಿದೆ" ಎಂದು ಸ್ಪಷ್ಟನೆ ನೀಡಿದರು.
ಹೊಸ ಶಿಕ್ಷಣ ನೀತಿ:
ಹೊಸ ಶಿಕ್ಷಣ ನೀತಿ ಜಾರಿಗಳಿಸುವ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಅದರ ಕರಡು ಸಿದ್ಧವಾಗುತ್ತಿದ್ದು, ಈ ವೇಳೆ ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲೇಬೇಕು. ಇದರ ಜತೆಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನೂ ರೂಪಿಸಬಹುದು. ಆದ್ದರಿಂದ ಹಣಕಾಸು ಹಂಚಿಕೆ ಆಗಬೇಕಾಗಿರುವ ಬದಲಾವಣೆ ಮುಂತಾದ ವಿಚಾರಗಳನ್ನು ಗಮನದಲ್ಲಿಟ್ಟುಕಂಡು ಹೊಸ ಶಿಕ್ಷಣ ನೀತಿ ರೂಪಿಸಲಾಗುವುದು,'' ಎಂದು ಸುದ್ದಿಗಾರರ ಪ್ರಶ್ನೆಗೆ ಡಿಸಿಎಂ ಡಾ. ಅಶ್ವತ್ಥನಾರಾಯಣ ಉತ್ತರಿಸಿದರು.