ನವದೆಹಲಿ: ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಸ್ಪೀಕರ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಶಾಸಕರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ ಇಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ಎತ್ತಿ ಹಿಡಿದಿದೆ. ಜೊತೆಗೆ ಅನರ್ಹಗೊಂಡಿರುವ ಎಲ್ಲಾ ಶಾಸಕರೂ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಆದೇಶ ನೀಡಿದೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠದಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ.
17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಿದೆ. ಆದರೆ 2023ರವರೆಗೆ ಅಂದರೆ ಈ ವಿಧಾನಸಭೆ ಅವಧಿ ಮುಗಿಯವರೆಗೆ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಹಿಂದಿನ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರು ಕಾಂಗ್ರೆಸ್ನ 13, ಜೆಡಿಎಸ್ 3 ಹಾಗೂ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರ ಜೊತೆಗೆ ಈ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅವರು ಯಾವುದೇ ರೀತಿಯ ಸಾಂವಿಧಾನಿಕ ಸ್ಥಾನ ಅಲಂಕರಿಸುವಂತಿಲ್ಲ ಎಂದು ಆದೇಶ ನೀಡಿದ್ದರು.