ವ್ಯಾಸಂಗದ ಸಾಲ ಮನ್ನಾಕ್ಕೆ ಆಗ್ರಹ

       

Last Updated : Jan 6, 2018, 05:36 PM IST
  • ವಿದ್ಯಾಭ್ಯಾಸಕ್ಕಾಗಿ ತೆಗೆದುಕೊಳ್ಳುವ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವಂತಿಲ್ಲ, ಜೊತೆಗೆ ವ್ಯಾಸಂಗ ಮುಗಿಯುವವರೆಗೆ ಬಡ್ಡಿ ವಿಧಿಸುವಂತಿಲ್ಲ.
  • ಆದರೆ ಬ್ಯಾಂಕಿನ ಅಧಿಕಾರಿಗಳು ಈ ಯಾವುದೇ ನಿಯಮವನ್ನು ಪಾಲಿಸದೆ ಪೋಷಕರನ್ನು ಪೀಡಿಸುತಿದ್ದಾರೆ
  • ಪದವಿ ಪಡೆದವರೂ ನಿರುದ್ಯೋಗ ಸಮಸ್ಯೆ ಎದರಿಸುತ್ತಿದ್ದಾರೆ‌.
  • ನಿರುದ್ಯೋಗಿ ಪದವಿದರರು ಸಾಲ ಮರು ಪಾವತಿಸಲು ಕಡುಕಷ್ಟವಾಗಿದೆ.
ವ್ಯಾಸಂಗದ ಸಾಲ ಮನ್ನಾಕ್ಕೆ ಆಗ್ರಹ title=

ನವದೆಹಲಿ: ವಿದ್ಯಾಭ್ಯಾಸ ಮುಗಿಸಿದ ಯುವಕರಿಗೆ ಉದ್ಯೋಗ ಕೊಡಿ ಅಥವಾ ಅವರುಗಳ ವಿದ್ಯಾಭ್ಯಾಸದ ಸಾಲ ಮನ್ನಾ ಮಾಡಿ ಎಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ರಾಜ್ಯಾಧ್ಯಕ್ಷ ಎಂ.ಬಿ. ಅಂಬಲಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.

ಶನಿವಾರ ದೆಹಲಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅಂಬಲಗಿ ಅವರು, ವಿದ್ಯಾಭ್ಯಾಸಕ್ಕಾಗಿ ತೆಗೆದುಕೊಳ್ಳುವ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವಂತಿಲ್ಲ, ಜೊತೆಗೆ ವ್ಯಾಸಂಗ ಮುಗಿಯುವವರೆಗೆ ಬಡ್ಡಿ ವಿಧಿಸುವಂತಿಲ್ಲ. ಆದರೆ ಬ್ಯಾಂಕಿನ ಅಧಿಕಾರಿಗಳು ಈ ಯಾವುದೇ ನಿಯಮವನ್ನು ಪಾಲಿಸದೆ ಪೋಷಕರನ್ನು ಪೀಡಿಸುತಿದ್ದಾರೆ ಎಂದು‌ ಹೇಳಿದರು.

ಇಡೀ ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ವಿದ್ಯಾರ್ಥಿಗಳು ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿಗೆ ಬಡ್ಡಿ ಬೆಳೆದು ಸಾಲಕಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಯುಪಿಎ ಸರ್ಕಾರ ಬಡ್ಡಿ ಮನ್ನಾ ಮಾಡುವ ಅದೇಶ ಹೊರಡಿಸಿತ್ತು. ಆದರೆ ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಬಡ್ಡಿಯ ಹಣವನ್ನು ಬಿಡುಗಡೆ ಮಾಡಿಲ್ಲ. ಬ್ಯಾಂಕಿನವರು ಪೋಷಕರ ಮೇಲೆ‌ ಒತ್ತಡ ಹೇರುತ್ತಿದ್ದಾರೆ ಎಂದರು.

ಈ ವಿಷಯವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಸಿದೆವು. ಅವರು 'ದೆಹಲಿಗೆ ಬನ್ನಿ, ಚಿಟಿಕೆ‌ ಹೊಡೆಯುವುದರೊಳಗೆ ಸಮಸ್ಯೆ ಬಗೆಹರಿಸುತ್ತೇವೆ' ಎಂದು ಭರವಸೆ ನೀಡಿದರು. ಇದೇ ರೀತಿ ಸಂಸದೆ‌ ಶೋಭಾ ಕರಂದ್ಲಾಜೆ ಕೂಡ ಆಶ್ವಾಸನೆ ನೀಡಿದರು. ಆದರೆ ನಮ್ಮ ಬೇಡಿಕೆ ಮಾತ್ರ ಈಡೇರಲಿಲ್ಲ. ನಂತರ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ ಮತ್ತು ರಮೇಶ್ ಜಿಗಜಿಣಗಿಯವರಿಗೂ ಮನವಿ ಮಾಡಿದೆವೆವು. ಪ್ರಯೋಜನವಾಗಿಲ್ಲ. ಈಗ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್‌ ಸೇಡಂ ಮುಖಾಂತರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಿ ವಿನಂತಿಸಿಕೊಂಡಿದ್ದೇವೆ. ಮುಂಬರುವ ಬಜೆಟ್ ನಲ್ಲಿಯೇ ವಿದ್ಯಾರ್ಥಿಗಳ ವ್ಯಾಸಂಗದ ಸಾಲ ಮನ್ನಾ ಮಾಡುವಂತೆ ಕೇಳಿಕೊಂಡಿದ್ದೇವೆ. ಇಬ್ಬರೂ ಕೂಡ ಭರವಸೆ ನೀಡಿರುವುದರಿಂದ ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದೇವೆ ಎಂದು ವಿವರಿಸಿದರು.

ಪದವಿ ಪಡೆದವರೂ ನಿರುದ್ಯೋಗ ಸಮಸ್ಯೆ ಎದರಿಸುತ್ತಿದ್ದಾರೆ‌. ನಿರುದ್ಯೋಗಿ ಪದವಿದರರು ಸಾಲ ಮರು ಪಾವತಿಸಲು ಕಡುಕಷ್ಟವಾಗಿದೆ. ಕೇಂದ್ರ ಸರಕಾರದ ಮುದ್ರಾ ಯೋಜನೆ ಸಂಪೂರ್ಣ ವಿಫಲವಾಗಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಉದ್ಯೋಗಾವಕಾಶವನ್ನು ನಿರ್ಮಿಸಬೇಕು ಅಥವಾ ವಿದ್ಯಾರ್ಥಿಗಳಿಗೆ ನೀಡಿರುವ ವ್ಯಾಸಂಗದ ಸಾಲವನ್ನು ಮನ್ನಾ ಮಾಡಬೇಕು‌. ಈ ಬಗ್ಗೆ ಬಜೆಟ್ ವರೆಗೂ ಕಾದು ನೋಡುತ್ತೇವೆ. ಬಜೆಟ್ ನಲ್ಲಿ ಘೋಷಣೆಯಾಗದಿದ್ದರೆ ರಾಜ್ಯದ ಪೋಷಕರು ದೆಹಲಿಗೆ ಆಗಮಿಸಿ ಜಂತರ್ ಮಂತರ್ ನಲ್ಲಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Trending News