ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ಹಿಂಸಾತ್ಮಕ ಸ್ವರೂಪ ನೀಡಿದ ಆರೋಪ ಎದುರಿಸುತ್ತಿರುವ ನಿಷೇಧಿತ ಸಂಘಟನೆಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ, ದೆಹಲಿಯ ಶಾಹೀನ್ ಬಾಗ್ ಜೊತೆಗಿನ ಕನೆಕ್ಷನ್ ಇದೀಗ ಬಹಿರಂಗವಾಗಿದೆ.
ಈ ಕುರಿತು ಬೆಳಕಿಗೆ ಬಂದ ದಾಖಲೆಗಳಲ್ಲಿ ದೆಹಲಿಯ ಶಾಹೀನ್ ಬಾಗ್ ನಲ್ಲಿ PFIನ ಹಲವು ಕಚೇರಿಗಳಿರುವುದು ತಿಳಿದುಬಂದಿದೆ. ಇವುಗಳಲ್ಲಿ ಒಟ್ಟು 5 ಕಚೇರಿಗಳ ಇರುವಿಕೆ ಖಚಿತಪಡಿಸಲಾಗಿದ್ದು, ಕೆಲ ಕಚೇರಿಗಳು ಪ್ರತಿಭಟನಾ ಸ್ಥಳಕ್ಕೆ ತೀರಾ ಹತ್ತಿರವಾಗಿವೆ.
ಮೂಲಗಳ ಪ್ರಕಾರ ಕಳೆದ ಕೆಲ ದಿನಗಳಿಂದ PFI ಮೂರು ಮತ್ತು ಅದರ ಅಂಗ ಸಂಸ್ಥೆಯಾಗಿರುವ ರಿಹ್ಯಾಬ್ ಇಂಡಿಯಾ ಫೌಂಡೇಶನ್ ನ ಎರಡು ಕಚೇರಿಗಳು ಶಾಹೀನ್ ಬಾಗ್ ನಲ್ಲಿ ತಲೆ ಎತ್ತಿವೆ ಎನ್ನಲಾಗಿದೆ.
PFIನ ಮೂರು ಕಚೇರಿಗಳು G-78, ಶಾಹೀನ್ ಬಾಗ್, ಜಾಮಿಯಾ ನಗರ್, G-66 ಶಾಹೀನ್ ಬಾಗ್, ಜಾಮೀಯಾ ನಗರ್, F-30 ಶಾಹೀನ್ ಬಾಗ್, ಜಾಮಿಯಾನಗರ್ ಗಳಲ್ಲಿವೆ.
ಇನ್ನೊಂದೆಡೆ ರಿಹ್ಯಾಬ್ ಇಂಡಿಯಾ ಫೌಂಡೇಶನ್ ಗೆ ಸಂಬಂಧಪಟ್ಟ ಒಂದು ಕಚೇರಿ N-44, ಗ್ರೌಂಡ್ ಫ್ಲೋರ್, ಹಿಲಾಲ್ ಹೋಮ್ಸ್, ಅಬ್ದುಲ್ ಫಜಲ್ ಎನ್ಕ್ಲೇವ್ 1, ಜಾಮೀಯಾನಗರ್ ನಲ್ಲಿದ್ದರೆ, ಇನ್ನೊಂದು ಕಚೇರಿ D-31, ಜಂಗ್ ಪುರ ನಲ್ಲಿದೆ.
ಕಳೆದ ಹಲವು ದಿನಗಳಿಂದ ದೆಹಲಿಯ ಶಾಹೀನ್ ಬಾಗ್ ದೇಶ ಹಾಗೂ ವಿದೇಶಿ ಮಾಧ್ಯಮಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇಲ್ಲಿ ಕಳೆದ ಒಂದು ತಿಂಗಳಿನಿಂದ CAA ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರದರ್ಶನದಲ್ಲಿ ಮಹಿಳೆಯರು ಪ್ರಮುಖವಾಗಿ ಭಾಗವಹಿಸಿದ್ದಾರೆ.
ದೆಹಲಿಯಿಂದ ನೋಯ್ಡಾಗೆ ಹೋಗುವ ಒಂದು ಮಾರ್ಗವನ್ನು ಪ್ರತಿಭಟನಾಕಾರರು ಸುತ್ತುವರೆದಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಈ ಪ್ರದರ್ಶನಕ್ಕೆ ಯಾರು ಹಣಕಾಸಿನ ನೆರವು ಒದಗಿಸುತ್ತಿದ್ದಾರೆ?
ಆರಂಭದಿಂದಲೇ ಈ ಪ್ರತಿಭಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ವಿಶೇಷವಾಗಿ ಈ ಎಲ್ಲ ಪ್ರತಿಭಟನೆಗೆ ಯಾರು ಹಣಕಾಸಿನ ನೆರವು ಒದಗಿಸುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಲಾಗುತ್ತಿದೆ. ಸದ್ಯ PFI ಕಚೇರಿಗಳು ಪ್ರತಿಭಟನಾ ಸ್ಥಳದ ಹತ್ತಿರ ತೆರೆದುಕೊಂಡಿದ್ದು, ಈ ಪ್ರತಿಭಟನೆಯ ಹಿಂದೆ PFI ಕೈವಾಡವಿದೆಯೇ ಎಂದು ಶಂಕಿಸಲಾಗಿದೆ.
ದೇಶದ ಗಣ್ಯ ವಕೀಲರಿಗೆ ಹಣ ನೀಡಲಾಗಿದೆ
PFIಗೆ ಸಂಬಂಧಿಸಿದಂತೆ ಝೀ ನ್ಯೂಸ್ ವರದಿಯೊಂದನ್ನು ಬಹಿರಂಗಪಡಿಸಿದ್ದು, PFI ಬ್ಯಾಂಕ್ ಅಕೌಂಟ್ ನಿಂದ ದೇಶದ ಖ್ಯಾತ ವಕೀಲರಿಗೆ ಹಣ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಕಪಿಲ್ ಸಿಬ್ಬಲ್ ಹಾಗೂ ಇಂದಿರಾ ಜಯಸಿಂಗ್ ಅವರ ಹೆಸರೂ ಕೂಡ ಶಾಮೀಲಾಗಿದೆ. ಒಟ್ಟು 2ರಿಂದ 3 ದಿನಗಳೊಳಗೆ 120 ಕೋಟಿ ರೂ. ಗಳನ್ನು ಜಮೆ ಮಾಡಿ ಪುನಃ ವಿಥ್ ಡ್ರಾ ಮಾಡಲಾಗಿದೆ.
ಆರೋಪಗಳ ಕುರಿತು ಸಿಬ್ಬಲ್ ಮತ್ತು ದವೆ ಹೇಳಿದ್ದೇನು?
ಈ ಕುರಿತಾದ ಆರೋಪಗಳನ್ನು ಅಲ್ಲಗಳೆದಿರುವ ಖ್ಯಾತ ವಕೀಲ ಕಪಿಲ್ ಸಿಬ್ಬಲ್, ಇದೊಂದು ಕಟ್ಟುಕಥೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಹಾಗೂ ವಕೀಲ ದುಷಂತ್ ದವೆ, ವಕೀಲರಿಗೆ ನೀಡಲಾಗುವ ಶುಲ್ಕ ಅಧಿಕೃತವಾಗಿ ನೀಡಲಾಗುತ್ತದೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, "ನಾನು PFIನ ಯಾವುದೇ ಪ್ರಕರಣದ ಕುರಿತು ವಾದ ನಡೆಸಿಲ್ಲ. ಆದರೆ, ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಥರ್ಡ್ ಪಾರ್ಟಿ ಯಿಂದ ಅವರು ನನಗೆ ಈ ಶುಲ್ಕ ನೀಡಿದ್ದಾರೆ ಎಂಬುದು ನನಗೆ ನೆನಪಿಲ್ಲ" ಎಂದಿದ್ದಾರೆ.
"ನನಗೆ ಅವರು ಒಂದು ವೇಳೆ ಶುಲ್ಕ ಪಾವತಿಸಿದ್ದೆ ಆಗಿದ್ದಲ್ಲಿ ಆಗ ಆ ಸಂಸ್ಥೆ ನಿಷೇಧಿತ ಸಂಘಟನೆಯಾಗಿತ್ತು ಎಂದು ನನಗೆ ಅನಿಸುವುದಿಲ್ಲ. ನಾನು ಇಂತಹ ಸಂಗತಿಗಳನ್ನು ಪರಿಗಣಿಸುವುದಿಲ್ಲ ಹಾಗೂ ಅಲ್ಪಸಂಖ್ಯಾತರ ಹಕ್ಕು ಕಾಪಾಡುವ ಉದ್ದೇಶದಿಂದ ಹೋರಾಟ ಮುಂದುವರೆಸುವೆ" ಎಂದು ದವೆ ಹೇಳಿದ್ದಾರೆ.
ಆದರೆ ಇಂದಿರಾ ಜಯಸಿಂಗ್ ಹಾಗೂ ಅಬ್ದುಲ್ ಸಮರ್ ಅವರು ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.