ನವದೆಹಲಿ: ಏಪ್ರಿಲ್ 2 ರಿಂದ ಹರಿದ್ವಾರದ ಶಿಬಿರದಲ್ಲಿ ವಾಸಿಸುತ್ತಿದ್ದ 45 ವರ್ಷದ ವಲಸೆ ಕಾರ್ಮಿಕ, ಎದೆ ನೋವಿನಿಂದ ಗುರುವಾರ ಬೆಳಿಗ್ಗೆ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ.
ರೂರ್ಕಿ ಬಳಿಯ ಉತ್ತರ ಪ್ರದೇಶದ ತನ್ನ ಊರಿಗೆ ಕಾಲ್ನಡಿಗೆಯಲ್ಲಿ ಹೋಗುವುದಕ್ಕೆ ತಡೆ ಹಿಡಿದ ನಂತರ ಕಾರ್ಮಿಕನನ್ನು ಹರಿದ್ವಾರ-ದೆಹಲಿ ಹೆದ್ದಾರಿಯಲ್ಲಿ (ಹರಿದ್ವಾರ ಜಿಲ್ಲೆಯ) ತಾತ್ಕಾಲಿಕ ಪರಿಹಾರ ಶಿಬಿರಕ್ಕೆ ಕರೆದೊಯ್ಯಲಾಯಿತು. ಆತನನ್ನು ಉತ್ತರ ಪ್ರದೇಶದ ರಾಣಿ ಕೊಠಾರಿ ಅಲಿಗಢ ನಿವಾಸಿ ಭೂದೇವ್ ಸಿಂಗ್ ಅವರ ಪುತ್ರ ನೇತ್ರಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಏಪ್ರಿಲ್ 2 ರಿಂದ, ಅವರು ರೂರ್ಕಿ ಬಳಿ ಸಿಲುಕಿರುವ 40ಕ್ಕೂ ಅಧಿಕ ಕಾರ್ಮಿಕರ ತಾತ್ಕಾಲಿಕ ಪರಿಹಾರ ಶಿಬಿರವಾದ ಗ್ರ್ಯಾಂಡ್ ವೇದಾಂತಮ್ ಹಾಲ್ ನಲ್ಲಿ ವಾಸಿಸುತ್ತಿದ್ದರು.ಅಧಿಕಾರಿಗಳ ಪ್ರಕಾರ, ಬುಧವಾರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಇದೇ ವೇಳೆ ವೈದ್ಯರು ಅಲ್ಲಿಗೆ ಹಾಜರಾಗಿದ್ದರೂ, ಅವರು ಗುರುವಾರ ಬೆಳಿಗ್ಗೆ ನಿಧನರಾದರು ಎನ್ನಲಾಗಿದೆ.ಅವರ ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಹಾರ ಶಿಬಿರದ ಅಧಿಕಾರಿಗಳು ಋಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಕಳುಹಿಸಿದ್ದಾರೆ.
ಏಪ್ರಿಲ್ 2 ರಂದು ಮೃತ ಕಾರ್ಮಿಕ ಡೆಹ್ರಾಡೂನ್ನಿಂದ ಬರುತ್ತಿದ್ದ. ಲಾಕ್ಡೌನ್ ನಿರ್ಬಂಧಗಳ ಮಧ್ಯೆ ಕಾಲ್ನಡಿಗೆಯಲ್ಲಿ ಅಲಿಗಢ ದಲ್ಲಿರುವ ತನ್ನ ಸ್ವಂತ ನಗರದ ಕಡೆಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ರೂರ್ಕಿಯಲ್ಲಿ ಅವರನ್ನು ನಿಲ್ಲಿಸಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ ರವಿಶಂಕರ್ ಅವರು ವಲಸೆ ಕಾರ್ಮಿಕನ ಸಾವಿನ ಬಗ್ಗೆ ತಿಳಿದುಬಂದಾಗ, ಅವರು ತಕ್ಷಣ ಈ ವಿಷಯದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದರು. ರೂರ್ಕಿ ಜಂಟಿ ಮ್ಯಾಜಿಸ್ಟ್ರೇಟ್ ನಮಾಮಿ ಬನ್ಸಾಲ್ ಅವರು ವಿಚಾರಣೆ ನಡೆಸಲಿದ್ದು, ಅವರು ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.
ಹೆಚ್ಚುವರಿ ನೋಡಲ್ ಅಧಿಕಾರಿ ಹರಿದ್ವಾರ್ ನಲಿನೀತ್ ಘಿಲ್ಡಿಯಾಲ್ ಮಾತನಾಡಿ, ಆಹಾರ, ಬಟ್ಟೆ, ನೈರ್ಮಲ್ಯಕಾರರು, ಸ್ವಚ್ಚತೆ ಆರೋಗ್ಯ ತಪಾಸಣೆ ಮತ್ತು ಮನರಂಜನಾ ಅಂಶಗಳಿಂದ ಹಿಡಿದು ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿರುವ ಜನರ ಬಗ್ಗೆ ಸರಿಯಾದ ಕಾಳಜಿ ವಹಿಸಲಾಗುತ್ತಿದೆ ಎಂದರು.
'ನಾವು ಯೋಗ ತರಗತಿಗಳು, ಪ್ರೇರಕ ಅವಧಿಗಳನ್ನು ನಡೆಸುತ್ತಿದ್ದೇವೆ ಮತ್ತು ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಸಲಹೆ ನೀಡುತ್ತಿದ್ದೇವೆ" ಎಂದು ಘಿಲ್ಡಿಯಾಲ್ ಹೇಳಿದರು.