ನವದೆಹಲಿ: ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ(UNSC) ಸಭೆಯಲ್ಲಿ ಭಾರತ ನೆರೆ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಅದನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಮತ್ತು ಭಯೋತ್ಪಾದನೆ ವಿರುದ್ಧ ಅಭಿಯಾನ ನಡೆಸುವಂತೆ ವಿಶ್ವದ ಇತರೆ ದೇಶಗಳಿಗೆ ಮನವಿ ಮಾಡಿದೆ. 1993 ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ ಮತ್ತು ವಿಶ್ವಸಂಸ್ಥೆ ಘೋಷಿಸಿದ ಇತರೆ ಭಯೋತ್ಪಾದಕರು ನೆರೆ ರಾಷ್ಟ್ರದ ಆಶ್ರಯದಲ್ಲಿದ್ದಾರೆ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ಇದೇ ವೇಳೆ , ಪರಾರಿಯಾದ ಕುಖ್ಯಾತ ಅಪರಾಧಿಗಳು ಮತ್ತು ಲಷ್ಕರ್-ಎ-ತೊಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್ ಗಳಂತಹ ಭಯೋತ್ಪಾದಕ ಸಂಘಟನೆಗಳು ನೀಡುತ್ತಿರುವ ಬೆದರಿಕೆಯನ್ನು ತೊಡೆದುಹಾಕಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಭಾರತ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 'ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಡುವಿನ ಸಂಬಂಧಕ್ಕೆ ಪರಿಹಾರ' ಎಂಬ ವಿಷಯದ ಕುರಿತುನಡೆಸಲಾಗಿರುವ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ ಭಾರತ ಈ ವಿಷಯಗಳನ್ನು ಪ್ರಸ್ತಾಪಿಸಿದೆ. ತನ್ನ ಹೇಳಿಕೆಯಲ್ಲಿ ಭಾರತ, 'ಗಡಿಭಾಗದಲ್ಲಿ ನಡೆಸಲಾಗುತ್ತಿರುವ ಪ್ರಾಯೋಜಿತ ಭಯೋತ್ಪಾದನೆಯಿಂದ ಭಾರತ ಬಳಲುತ್ತಿದೆ. ಸಂಘಟಿತ ಅಪರಾಧ ಮತ್ತು ಉಭಯ ದೇಶಗಳ ನಡುವಿನ ಭಯೋತ್ಪಾದನೆಯ ನಡುವಿನ ಸಂಬಂಧದ ತೀವ್ರತೆ ನಾವು ನೇರವಾಗಿ ಅನುಭವಿಸಿದ್ದೇವೆ' ಎಂದು ಭಾರತ ಹೇಳಿದೆ.
'ಸಂಘಟಿತ ಅಪರಾಧಿಗಳು ಸಿಂಡಿಕೇಟ್, ಚಿನ್ನ ಮತ್ತು ನಕಲಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಡಿ-ಕಂಪನಿ, ಕೇವಲ ಒಂದೇ ರಾತ್ರಿಯಲ್ಲಿ ಭಯೋತ್ಪಾದನೆಯ ಸಂಘಟನೆಯಾಗಿ ಮಾರ್ಪಟ್ಟಿದೆ ಮತ್ತು 1993 ರಲ್ಲಿ ಮುಂಬೈ ನಗರದಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದೆ. ಈ ದಾಳಿಯಲ್ಲಿ, 250 ಕ್ಕೂ ಹೆಚ್ಚು ಮುಗ್ಧ ನಾಗರಿಕರು ಮೃತಪಟ್ಟಿದ್ದು, ಲಕ್ಷಾಂತರ ಮತ್ತು ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಗೆ ಹಾನಿಯುಂಟಾಗಿದೆ.' ಎಂದು ಭಾರತ ಹೇಳಿದೆ.
ಭಾರತ ತನ್ನ ಹೇಳಿಕೆಯಲ್ಲಿ ಯಾವುದೇ ದೇಶವನ್ನು ಉಲ್ಲೇಖಿಸದೆ, 'ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ 'ನೆರೆರಾಷ್ಟ್ರದ ಆಶ್ರಯದಲ್ಲಿದ್ದಾನೆ. ಆ ದೇಶ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ, ಮತ್ತು ಬರಿಸುವ ಪದಾರ್ಧಗಳ ವ್ಯಾಪಾರ ಹಾಗೂ ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟ ಉಗ್ರರು ಹಾಗೂ ಉಗ್ರವಾದಿ ಸಂಘಟನೆಗಳ ಭದ್ರ ಕೋಟೆಯಾಗಿದೆ ಎಂದು ಭಾರತ ಹೇಳಿದೆ.