ನವದೆಹಲಿ: ಶಿವನ ಪ್ರಸಾದ ಎಂದು ಪರಿಗಣಿಸಲ್ಪಡುವ ಮತ್ತು ಚಮತ್ಕಾರಗಳಿಂದ ಕೂಡಿರುವ ಈ ಬೀಜ ದೇವಾದಿದೇವ ಶಿವನ ಕಣ್ಣೀರಿನಿಂದ ತಯಾರಾಗಿದೆ. ಶಿವನಿಗೆ ರುದ್ರಾಕ್ಷ ಅತ್ಯಂತ ಪ್ರೀಯವಾಗಿದೆ. ಹೀಗಾಗಿ ಶಿವಭಕ್ತರು ಯಾವಾಗಲು ತನ್ನ ಶರೀರದ ಮೇಲೆ ಇದನ್ನು ಧರಿಸುತ್ತಾರೆ. ರುದ್ರಾಕ್ಷದ ವಿಭಿನ್ನ ಬೀಜಗಳ ಸಂಬಂಧ ವಿವಿಧ ದೇವ-ದೇವತೆ ಹಾಗೂ ಮನೋಕಾಮನೆಗಳ ಜೊತೆಗಿದೆ. ಉದಾಹರಣೆಗೆ ಏಕಮುಖಿ ರುದ್ರಾಕ್ಷ ಸಾಕ್ಷಾತ್ ಶಿವಸ್ವರೂಪ ಎಂದು ಭಾವಿಸಲಾಗುತ್ತದೆ. ಇದು ಭೋಗ ಹಾಗೂ ಮೋಕ್ಷ ಪ್ರದಾಯಕವಾಗಿದೆ ಎನ್ನಲಾಗುತ್ತದೆ. ಎರಡು ಮುಖಗಳ ರುದ್ರಾಕ್ಷಕ್ಕೆ ದೇವ ದೇವೇಶ್ವರ ಎಂದು ಹೇಳಲಾಗುತ್ತದೆ. ಇದು ಧರಿಸುವವರ ಎಲ್ಲ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತದೆ.
ಅಮೃತ ಬೀಜ ಮೋಕ್ಷ ಪ್ರದಾಯಕ
ಮೂರೂ ಮುಖದ ರುದ್ರಾಕ್ಷದಿಂದ ಎಲ್ಲ ವಿದ್ಯೆಗಳು ಪ್ರಾಪ್ತವಾಗುತ್ತವೆ. ನಾಲ್ಕು ಮುಖಗಳ ರುದ್ರಾಕ್ಷ ಬ್ರಹ್ಮಸ್ವರೂಪಿಯಾಗಿದೆ. ಈ ರುದ್ರಾಕ್ಷದ ದರ್ಶನ ಮಾತ್ರದಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಪಂಚ ಮುಖಿ ರುದ್ರಾಕ್ಷ ಕಾಲಾಗ್ನಿ ರುದ್ರಸ್ವರೂಪಿ. ಇದು ಎಲ್ಲ ರೀತಿಯ ಸಾಮರ್ಥ್ಯ ಪ್ರದಾನ ಮಾಡುವ ಈ ರುದ್ರಾಕ್ಷ ಮೋಕ್ಷ ಪ್ರಾಪ್ತಿಗಾಗಿ ಹೆಸರುವಾಸಿಯಾಗಿದೆ.
ಭಾಗ್ಯ ಬದಲಾವಣೆಗೆ ಕಾರಣ ರುದ್ರಾಕ್ಷ
ಆರು ಮುಖಗಳ ರುದ್ರಾಕ್ಷ ಕಾರ್ತಿಕೇಯ ಸ್ವರೂಪ. ಇದನ್ನು ಧರಿಸುವುದರಿಂದ ವ್ಯಕ್ತಿ ಬ್ರಹ್ಮಹತ್ಯೆಯ ದೋಷದಿಂದಲೂ ಕೂಡ ಮುಕ್ತನಾಗುತ್ತಾನೆ. ಏಳು ಮುಖಗಳ ರುದ್ರಾಕ್ಷ ಧಾರಣೆ ಭಿಕ್ಷುಕನನ್ನು ಕೂಡ ಅರಸನನ್ನಾಗಿ ಮಾಡುತ್ತದೆ. ಭೈರವ ಸ್ವರೂಪಿ ಎಂದೇ ಕರೆಯಲಾಗುವ ಎಂಟು ಮುಖಗಳ ರುದ್ರಾಕ್ಷ ಮನುಷ್ಯನಿಗೆ ಪೂರ್ಣಾಯುಷ್ಯ ಪ್ರದಾಯಕ. ಒಂಭತ್ತು ಮುಖಗಳ ರುದ್ರಾಕ್ಷ ಕಪಿಲ ಮುನಿಯ ಹಾಗೂ ಹತ್ತು ಮುಖಗಳ ರುದ್ರಾಕ್ಷ ವಿಷ್ಣುಸ್ವರೂಪಿ ಎಂದು ಪರಿಗಣಿಸಲಾಗುತದೆ. ಹನ್ನೊಂದು ಮುಖಗಳ ರುಧ್ರಾಕ್ಷ ರುದ್ರಸ್ವರೂಪಿಯಾಗಿದ್ದು, ಇದನ್ನು ಧರಿಸುವ ವ್ಯಕ್ತಿಗಳು ಎಲ್ಲ ರಂಗಗಳಲ್ಲಿ ಯಶಸ್ಸನ್ನು ಕಾಣುತ್ತಾರೆ.
ಹೇಗೆ ಧರಿಸಬೇಕು?
ಕಪ್ಪು ಬಣ್ಣದ ದಾರದಿಂದ ರುದ್ರಾಕ್ಷವನ್ನು ಧರಿಸಬೇಡಿ. ಕೆಂಪು, ಹಳದಿ ಅಥವಾ ಬಿಳಿ ಬಣ್ಣದ ದಾರದಿಂದ ರುದ್ರಾಕ್ಷ ಧರಿಸಿ. ಬೆಳ್ಳಿ, ಚಿನ್ನ ಹಾಗೂ ತಾಮ್ರದಲ್ಲಿಯೇ ರುದ್ರಾಕ್ಷವನ್ನು ಧರಿಸಿ. ರುದ್ರಾಕ್ಷ ಧರಿಸುವಾಗ 'ಓಂ ನಮಃ ಶಿವಾಯ' ಮಂತ್ರ ಜಪಿಸಲು ಮರೆಯದಿರಿ. ಅಪವಿತ್ರರಾಗಿ ರುದ್ರಾಕ್ಷ ಧರಿಸಬೇಡಿ. ಅಪ್ಪಿತಪ್ಪಿಯೂ ಕೂಡ ಇತರರಿಗೆ ನಿಮ್ಮ ರುದ್ರಾಕ್ಷವನ್ನು ಧರಿಸಲು ನೀಡಬೇಡಿ.
ಎಷ್ಟು ರುದ್ರಾಕ್ಷಗಳನ್ನು ಧರಿಸಬೇಕು?
ಶಿವನ ಪ್ರಸಾದ ಎಂದೇ ಪರಿಗಣಿಸಲಾಗುವ ರುದ್ರಾಕ್ಷಗಳನ್ನು ಬೆಸ ಸಂಖ್ಯೆಯಲ್ಲಿಯೇ ಧರಿಸಬೇಕು. 27 ಬೀಜಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ರುದ್ರಾಕ್ಷ ಮಾಲೆಯನ್ನು ಧರಿಸಬೇಡಿ ಹಾಗೂ ತಯಾರಿಸಲೂ ಬೇಡಿ. ಇದರಿಂದ ಶಿವದೋಷಕ್ಕೆ ಗುರಿಯಾಗುವಿರಿ. 108 ಬೀಜಗಳ ರುದ್ರಾಕ್ಷ ಮಾಲೆ ಧರಿಸುವುದರಿಂದ ಹಾಗೂ ಜಪ ಮಾಡುವುದರಿಂದ ಸಾಧಕರಿಗೆ ವಿಶೇಷ ಕೃಪೆ ಲಭಿಸುತ್ತದೆ. ರುದ್ರಾಕ್ಷ ಧರಿಸುವುದರಿಂದ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಾಗುತ್ತದೆ.