ಬೆಂಗಳೂರು: ಕನ್ನಡಪರ, ಗಡಿ ಹೋರಾಟಗಾರ ಹಾಗೂ ಬೆಳಗಾವಿಯ ಪ್ರಥಮ ಕನ್ನಡ ಮಹಾಪೌರ ಸಿದ್ದನಗೌಡ ಪಾಟೀಲರು ಕೊನೆಯುಸಿರೆಳೆದಿದ್ದಾರೆ.
ಸತತ 2 ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಸಿದ್ದನಗೌಡ ಪಾಟೀಲರು 1956 ರಿಂದಲೂ ಕನ್ನಡ ಹೋರಾಟದ ಮುಂಚೂಣಿಯಲ್ಲಿದ್ದ ಅವರು 1984 ರಲ್ಲಿ ಬೆಳಗಾವಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದರು.1990 ರಲ್ಲಿ ಮತ್ತೆ ಪುನರಾಯ್ಕೆಗೊಂಡರು. 1991ರಲ್ಲಿ ಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡರು.
ಬೆಳಗಾವಿ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾಗಿ ಮೂರು ಅವಧಿಗಳವರೆಗೆ ಸೇವೆ ಸಲ್ಲಿಸಿದ್ದ ಅವರು ಕರ್ನಾಟಕ ಗ್ರಾಹಕರ ಮಹಾಮಂಡಳಿಯ ನಿರ್ದೇಶಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದರು. ಎರಡೂವರೆ ವರ್ಷಗಳ ಕಾಲ ಮಹಾಮಂಡಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ನಾಡು,ನುಡಿ,ಗಡಿ ಹೋರಾಟಗಳ ಮುಂಚೂಣಿಯಲ್ಲಿದ್ದ ಅವರು ಇತ್ತೀಚಿನವರೆಗೂ ಹೋರಾಟಗಳಲ್ಲಿ ಭಾಗವಹಿಸುತ್ತಲೇ ಬಂದಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರ ನಿಧನಕ್ಕೆ ಸಂತಾಪ ಸೂಚಿಸಿದೆ.