ನವದೆಹಲಿ: ಸರ್ವೋಚ್ಛ ನ್ಯಾಯಾಲಯ ಲೋನ್ ಮೊರೆಟೋರಿಯಂ (ಸಾಲ ಮರುಪಾವತಿಗೆ ಸಮಯಾವಕಾಶ) ಅವಧಿಯನ್ನು ಸೆಪ್ಟೆಂಬರ್ 28ರವರೆಗೆ ವಿಸ್ತರಿಸಿದೆ. ಅಂದರೆ, ಸೆಪ್ಟೆಂಬರ್ 28ರವರೆಗೆ ಯಾವುದೇ ಬ್ಯಾಂಕ್ ತನ್ನ ಯಾವುದೇ ಖಾತೆಯನ್ನು ನಾನ್ ಪರ್ಫಾರ್ಮಿಂಗ್ ಆಸ್ತಿ ಎಂದು ಘೋಷಿಸುವ ಹಾಗಿಲ್ಲ. ಈ ಕುರಿತಾದ ಮುಂದಿನ ವಿಚಾರಣೆ ಸೆಪ್ಟೆಂಬರ್ 28ಕ್ಕೆ ನಡೆಯಲಿದೆ.
ಇದಕ್ಕೂ ಮೊದಲು ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಸರ್ಕಾರ ಕೊವಿಡ್-19 ಮಹಾಮಾರಿಯ ಕಾಲಾವಧಿಯಲ್ಲಿ ಸಾಲದ ಕಂತು ಪಾವತಿಸುವುದರ ಮೇಲೆ ನೀಡಲಾದ ಸಡಿಲಿಕೆಯ ಮೇಲೆ ಬ್ಯಾಂಕುಗಳ ಮೂಲಕ ವಿಧಿಸಲಾಗುತ್ತಿರುವ ಬಡ್ಡಿಯ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿತ್ತು. ಇದನ್ನು ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯ ಕೇಂದ್ರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಗಳಿಗೆ ಉತ್ತರ ದಾಖಲಿಸಲು ಎರಡು ವಾರಗಳ ಕಾಲಾವಕಾಶ ನೀಡಿ, ಈ ಕುರಿತು ಮೊದಲು ಸ್ಪಷ್ಟಪಡಿಸಿ ಎಂದು ಹೇಳಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್, ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರ ನ್ಯಾಯಪೀಠವು ಇದೀಗ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಪಟ್ಟಿ ಮಾಡಿದೆ. ಈ ಕುಯ್ರಿತು ಹೇಳಿಕೆ ನೀಡಿರುವ ನ್ಯಾಯಪೀಠ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಎಲ್ಲಾ ಸಮಸ್ಯೆಗಳನ್ನು ಸಕ್ರಿಯವಾಗಿ ಪರಿಗಣಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಇದು ಅಂತಿಮ ಗಡುವಾಗಿದ್ದು, ಇನ್ಮುಂದೆ ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಲಿಸಲಾಗುವುದಿಲ್ಲ ಎಂದೂ ಕೂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಘೋಷಿಸಲಾದ ಮೊರಟೋರಿಯಂ ಅವಧಿಯಲ್ಲಿ ಮುಂದೂಡಲ್ಪಟ್ಟ ಕಂತುಗಳ ಮೇಲಿನ ಬಡ್ಡಿ ವಸೂಲಿ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಕೇಂದ್ರದ ಪರವಾಗಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ಕಾರದಲ್ಲಿ ಎಲ್ಲಾ ಸಮಸ್ಯೆಗಳನ್ನು ಉನ್ನತ ಮಟ್ಟದಲ್ಲಿ ಪರಿಗಣಿಸಲಾಗುತ್ತಿದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎರಡು ವಾರಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.