ನವದೆಹಲಿ: ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ಲೆನಿನ್ ಮೂರ್ತಿಯನ್ನು ನೆಲಸಮಗೊಳಿಸಿದ ಕೆಲವೇ ಘಂಟೆಗಳ ನಂತರದಲ್ಲಿ ಬಿಜೆಪಿಯು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಈ ಬಾರಿ ಬಿಜೆಪಿಯ ರಾಷ್ಟ್ರೀಯ ನಾಯಕ ಎಚ್ ರಾಜಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಲೆನಿನ್ ರನ್ನು ಟೀಕಿಸುವ ಭರದಲ್ಲಿ "ಲೆನಿನ್ ಯಾರು? ಭಾರತಕ್ಕಿರುವ ಅವರ ಸಂಬಂಧವೇನು? ಕಮುನಿಸಂ ಭಾರತಕ್ಕೆ ಹೇಗೆ ಸಂಬಂಧಿಸಲ್ಪಡುತ್ತದೆ? ಇಂದು ತ್ರಿಪುರಾದಲ್ಲಿ ಲೆನಿನ್ ಮೂರ್ತಿ ನೆಲಸಮಗೊಂಡಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಜಾತಿವಾದಿ ಪೆರಿಯರ್ ಮೂರ್ತಿಯು ಕೂಡಾ ನಿರ್ನಾಮಗೊಳ್ಳಲಿದೆ" ಎಂದು ಬರೆದುಕೊಂಡಿದ್ದಾರೆ. ಆದರೆ ನಂತರ ಈ ಪೋಸ್ಟ್ ನ್ನು ಅಳಿಸಿಹಾಕಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ದ್ರಾವಿಡಾರ್ ಕಜಗಂ ನಾಯಕ ಕೆ.ವೀರಮಣಿ, ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿರುವುದಲ್ಲದೆ ಅಂತಹ ಕಾರ್ಯಕ್ಕೆ ಕೈ ಹಾಕುವ ಧೈರ್ಯವನ್ನು ಬಿಜೆಪಿ ಮಾಡಲಿ,ಎಂದು ಸವಾಲು ಹಾಕಿದ್ದಾರೆ ." ಅವರು ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮ ರೌಡಿಸಂ ವರ್ತನೆ ತೋರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಅವರು ಅಧಿಕಾರಕ್ಕೆ ಬರುವ ಮೊದಲೇ ಈ ರೀತಿಯ ಹೇಳಿಕೆಗಳನ್ನು ನೀಡುವ ಧೈರ್ಯ ತೋರಿಸುತ್ತಿದ್ದಾರೆ. ಬೇಕಿದ್ದರೆ ಸಧ್ಯದಲ್ಲೇ ಪೆರಿಯರ್ ಮೂರ್ತಿ ಭಗ್ನಗೋಳಿಸಲಿ, ಅದರ ಜೊತೆ ನಂತರದ ಪರಿಸ್ಥಿತಿ ಯನ್ನು ಎದುರಿಸಲು ಕೂಡಾ ಸಿದ್ದವಾಗಲಿ" ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇನ್ನು ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಮಾತನಾಡಿ "ಅವರಿಗೆ ಪೆರಿಯರ್ ಮೂರ್ತಿಯನ್ನು ಮುಟ್ಟುವ ಯೋಗ್ಯತೆಯೂ ಇಲ್ಲ, ಅವರು ಹಿಂಸೆಯನ್ನು ಬಿತ್ತರಿಸುವ ಸಲುವಾಗಿ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಕಾನೂನು ನಿಯಮಾನುಸಾರ ಅವರನ್ನು ಈಗಾಗಲೇ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರನ್ನು ಜೈಲಿನಿಲ್ಲಿರಿಸಬೇಕಾಗಿತ್ತು ಎಂದರು.
ಪೆರಿಯಾರ್ ಭಾರತದ ಆಧುನಿಕ ಇತಿಹಾಸದಲ್ಲಿ ವೈದಿಕ ಸಂಪ್ರದಾಯಗಳನ್ನು ಧಿಕ್ಕರಸಿ ದ್ರಾವಿಡರ ಅಸ್ಮಿತೆಗಾಗಿ ದ್ರಾವಿಡ ಚಳುವಳಿಯನ್ನು ಹುಟ್ಟುಹಾಕಿದವರು, ಅಲ್ಲದೆ ದ್ರಾವಿಡ್ ಪರಂಪರೆಯು ಎಲ್ಲ ಪರಂಪರೆಗಳಿಗಿಂತಲೂ ಪುರಾತನವಾದದ್ದು ಎಂದು ಪೆರಿಯಾರ ವಾದಿಸಿದ್ದರು.