ಚುನಾವಣೆಗೆ ತಾಲೀಮು, ಭಿನ್ನಮತಕ್ಕೂ ಮುಲಾಮು: ಸಿಎಂ ಸಿದ್ದರಾಮಯ್ಯ

ಶಾಸಕಾಂಗ ಪಕ್ಷದ ಸಭೆಯನ್ನು ಶಾಸಕರಿಗೆ ಆತ್ಮವಿಶ್ವಾಸ ಹೆಚ್ಚಿಸಲು ಬಳಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ.

Last Updated : Oct 6, 2017, 12:37 PM IST
ಚುನಾವಣೆಗೆ ತಾಲೀಮು, ಭಿನ್ನಮತಕ್ಕೂ ಮುಲಾಮು: ಸಿಎಂ ಸಿದ್ದರಾಮಯ್ಯ title=

ಬೆಂಗಳೂರು: ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಬೂತ್ ಸಮಿತಿ ರಚನೆ, ಬೂತ್ ಏಜೆಂಟರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಭಿನ್ನಮತ ನಿವಾರಣೆ ಪ್ರಯತ್ನವೂ ನಡೆದಿದೆ. ಇದಕ್ಕಾಗಿ ಜಿಲ್ಲೆಗಳಲ್ಲಿ ಸಮನ್ವಯ ಸಮಿತಿಗಳ ರಚನೆಯೂ ಕೂಡ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶ. ಜನಪರ  ಕಾರ್ಯಕ್ರಮಗಳ ಬಗ್ಗೆ ಜನರ ಮೆಚ್ಚುಗೆಯೂ ಇದೆ. ಇದರ ಜೊತೆಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸಾಧನೆ ವಿವರಿಸಿದರೆ ಕಾರ್ಯಕ್ರಮ ಯಶಸ್ವಿ ಆಗುತ್ತದೆ. ಶಾಸಕರೂ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 

ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸುವುದರ ಜೊತೆಗೆ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು. ಪ್ರಧಾನಿ ಮೋದಿ ಅವರ ಬಾಯಿ ಬಡಾಯಿ, ಸಾಧನೆ ಶೂನ್ಯ. ಆದರೂ ಬಿಜೆಪಿಯವರು ಜನರಿಗೆ ಸುಳ್ಳು ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ನಾವು ಸುಳ್ಳು ಹೇಳುವ ಅಗತ್ಯ ಇಲ್ಲ. ಸರ್ಕಾರದ ಸಾಧನೆಗಳನ್ನು ತಿಳಿಸಿದರೆ ಸಾಕು. ಹೀಗಾಗಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಶಾಸಕರು ಹೆಚ್ಚು ಆಸಕ್ತಿ ವಹಿಸಬೇಕು. ಮನೆ ಮನೆಗೆ ತೆರಳಿ ಮತದಾರರ ನಾಡಿ ಮಿಡಿತ ಅರಿತರೆ, ಸರ್ಕಾರದ ಸಾಧನೆ ವಿವರಿಸಿದರೆ ಪಕ್ಷದ ಜೊತೆಗೆ ಶಾಸಕರಿಗೂ ಅನುಕೂಲ ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲೂ ಸಿದ್ಧತೆ ಆಗುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುವುದರಿಂದ ಜನ ಸಹ ಖುಷಿಯಾಗಿದ್ದಾರೆ. ಸರ್ಕಾರದ ಕಾರ್ಯಕ್ರಮ ಎಲ್ಲಿಯೇ ನಡೆದರೂ ಜನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದರಿಂದ ನಮ್ಮ ಕೆಲಸ ಅವರಿಗೆ ಸಮಾಧಾನ ತಂದಿದೆ ಎನಿಸುತ್ತಿದೆ. ಈಗಿನ ವಾತಾವರಣ ನೋಡಿದರೆ ಯಾರು ಏನೇ ಹೇಳಿದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನ್ನೂರರಷ್ಟು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

Trending News