ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಿದ್ದು, ಎರಡನೇ ಪಟ್ಟಿಯಲ್ಲಿ ಪ್ರಕಟಿಸಿದ್ದ ಕೆಜಿಎಫ್ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡುವ ಮೂಲಕ ಅಲ್ಲಿಯೂ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದೆ.
ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಕ್ಷೇತ್ರದಿಂದ ಬಿಜೆಪಿ ಜಿಲ್ಲಾ ವಕ್ತಾರ ಗೋಪಾಲ್ ಅವರ ಪತ್ನಿ ಹೆಚ್.ಜಿ.ಶ್ವೇತಾ ಗೋಪಾಲ್ ಅವರಿಗೆ ಟಿಕೆಟ್ ನೀಡಿರುವ ಬಿಜೆಪಿ, ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಜಿಫ್ ಕ್ಷೇತ್ರದಿಂದ ಮಾಜಿ ಶಾಸಕ ವೈ.ಸಂಪಂಗಿ ಅವರಿಗೆ ನೀಡಲಾಗಿದ್ದ ಟಿಕೆಟ್'ಗೆ ಬದಲಾಗಿ ಅವರ ಪುತ್ರಿ ಅಶ್ವಿನಿ ಸಂಪಂಗಿಗೆ ಟಿಕೆಟ್ ನೀಡಿದೆ.
ಕೋಲಾರದ ಎಸ್ ಸಿ ಮೀಸಲು ಕ್ಷೇತ್ರ ಕೆಜಿಎಫ್ ನಲ್ಲಿ ಕಾಂಗ್ರೆಸ್ ಪಕ್ಷ ಸಂಸದ ಕೆ.ಹೆಚ್.ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ಗೆ ಟಿಕೆಟ್ ನೀಡಿದೆ. ಹೀಗಾಗಿ ಬಿಜೆಪಿ ಕೂಡ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡುವ ಉದ್ದೇಶದಿಂದ ಸಂಪಂಗಿ ಅವರ ಪುತ್ರಿ ಎಸ್.ಅಶ್ವಿನಿಗೆ ಟಿಕೆಟ್ ನೀಡಲಾಗಿದೆ. ಆದರೂ ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೂ, ಈ ಚುನಾವಣಾ ಕಣ ಸಂಸದ ಮುನಿಯಪ್ಪ ಮತ್ತು ಶಾಸಕ ವೈ.ಸಂಪಂಗಿ ನಡುವಿನ ಪ್ರತಿಷ್ಠೆಯ ವಿಷಯವಾಗಿದೆ.
ಏ.8ರಂದು ಬಿಜೆಪಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಪೈಕಿ ಮೂವರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿತ್ತು. ಅವರಲ್ಲಿ ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಕಾರವಾರದಿಂದ ರೂಪಾಲಿ ನಾಯ್ಕ್ ಹಾಗೂ ಹಿರಿಯೂರಿನಿಂದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿತ್ತು.