ಬಾಗ್ಪಾತ್: ಪುತ್ರನ ಅಸ್ವಾಭಾವಿಕ ಸಾವನ್ನು ಕೊಲೆಯಲ್ಲ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರಿಂದ ಬೇಸತ್ತ ಮುಸ್ಲಿಂ ತಂದೆ, ತಮ್ಮ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಉತ್ತರಪ್ರದೇಶದ ಬಾಗ್ಪತ್ ಪ್ರದೇಶದ ಬದರ್ಖ ಗ್ರಾಮದಲ್ಲಿ ನಡೆದಿದೆ.
ಛಾಪ್ರೌಲಿ ಪೊಲೀಸ್ ಠಾಣೆ ಪ್ರದೇಶದ ಬದಾರ್ಖ ಗ್ರಾಮದ ನಿವಾಸಿ ಅಖ್ತರ್ ಎಂಬವರು ಸೋಮವಾರ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ನಂತರ ಸ್ವಯಂಪ್ರೇರಿತವಾಗಿ ಮತಾಂತರಗೊಂಡಿರುವುದಾಗಿ ಸಾಕ್ಷ್ಯ ಒದಗಿಸಿ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಹೇಳಿಕೆ ನೀಡಿರುವ ಅಖ್ತರ್, "ಪೊಲೀಸರು ತಮ್ಮ ಪುತ್ರನ ಸಾವಿನ ಬಗ್ಗೆ ನಿಖರ ತನಿಖೆ ನಡೆಸಲು ತಮ್ಮ ಮತಾಂತರ ಪ್ರೇರಣೆಯಾಗಲಿದೆ ಎಂದಿದ್ದಾರೆ.
ಕೆಲ ತಿಂಗಳ ಹಿಂದೆ ಮೃತಪಟ್ಟ ಅಖ್ತರ್ ಅವರ ಪುತ್ರನ ಸಾವಿನ ಬಗ್ಗೆ ಪೊಲೀಸ್ ತನಿಖೆಯಲ್ಲಿ ತೃಪ್ತಿ ಹೊಂದದ ಕಾರಣ ಇಡೀ ಕುಟುಂಬದ ಸದಸ್ಯರು ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಬಾಗ್ಪಾತ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರಿಷಿರೆಂದ್ರ ಕುಮಾರ್ ಖಚಿತಪಡಿಸಿದ್ದಾರೆ.
'ಹವನ್' ಸೇರಿದಂತೆ ಅಗತ್ಯ ಧಾರ್ಮಿಕ ಆಚರಣೆಗಳ ನಡುವೆ ಕುಟುಂಬವು ಅವರ ಧರ್ಮವನ್ನು ಬದಲಿಸಿದೆ. ಜೈಶ್ರೀರಾಮ್ ಎಂದು ಪಠಿಸುವ ಮೂಲಕ ತಮ್ಮ ಹೆಸರನ್ನೂ ಸದಸ್ಯರು ಬದಲಾಯಿಸಿಕೊಂಡಿದ್ದಾರೆ ಎಂದು ಮಂಗಳವಾರ ಯುವ ಹಿಂದೂ ವಾಹಿನಿ(ಭಾರತ್) ರಾಜ್ಯ ಮುಖ್ಯಸ್ಥ ಶೌಕೇಂದ್ರ ಖೋಖರ್ ಹೇಳಿದ್ದಾರೆ.
ಪುತ್ರನ ಸಾವಿನ ಬಗ್ಗೆ ಪೊಲೀಸರ ತನಿಖೆಯ ಬಗ್ಗೆ ಬೇಸತ್ತ ಕುಟುಂಬ ತಮ್ಮ ಧರ್ಮದ ಜನರ ಸಹಾಯ ಕೋರಿದೆ. ಆದರೆ ಯಾರೂ ಸಹಾಯಕ್ಕೆ ಮುಂದಾಗದ ಕಾರಣ ಇಡೀ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಖೋಖರ್ ವಿವರಿಸಿದ್ದಾರೆ.