ಬೆಂಗಳೂರಲ್ಲಿ ಸೈಬರ್ ವಂಚನೆಗೆ 1800 ಕೋಟಿಗೂ ಅಧಿಕ ಹಣ ಲೂಟಿ: ಗೋಲ್ಡನ್ ಅವರ್‌ನಲ್ಲಿ ಏನು ಮಾಡಬೇಕು?

Bangalore Cyber Crime CASES: ನವೆಂಬರ್ 30ರವರೆಗಿನ ದಾಖಲೆಗಳ ಪ್ರಕರಣ ಬೆಂಗಳೂರು ಒಂದರಲ್ಲೇ 16,357 ಸೈಬರ್ ವಂಚನೆ ಪ್ರಕರಣಗಳು (ತಿಂಗಳಿಗೆ ಸರಾಸರಿ 1,360) ದಾಖಲಾಗಿದ್ದು, ಬರೋಬ್ಬರಿ 1800,57,17,886 ಕೋಟಿ ರೂ. ಹಣ ವಂಚಕರ ಪಾಲಾಗಿದೆ. ​

Written by - Puttaraj K Alur | Last Updated : Dec 30, 2024, 10:21 PM IST
  • ಸಿಲಿಕಾನ್‌ ಸಿಟಿ ಬೆಂಗಳೂರು ಸೈಬರ್ ಕ್ರೈಮ್ ರಾಜಧಾನಿಯಾಗುತ್ತಿದೆಯಾ?
  • ಒಂದೇ ವರ್ಷದಲ್ಲಿ ಸಾವಿರ ಕೋಟಿಗೂ ಅಧಿಕ ಹಣ ಸೈಬರ್ ವಂಚಕರ ಪಾಲು
  • ಸೈಬರ್‌ ವಂಚನೆ ಬಗ್ಗೆ ಎಚ್ಚರ, ಗೋಲ್ಡನ್‌ ಅವರ್‌ನಲ್ಲೇ ಹಣ ಉಳಿಸಿಕೊಳ್ಳಿರಿ
ಬೆಂಗಳೂರಲ್ಲಿ ಸೈಬರ್ ವಂಚನೆಗೆ 1800 ಕೋಟಿಗೂ ಅಧಿಕ ಹಣ ಲೂಟಿ: ಗೋಲ್ಡನ್ ಅವರ್‌ನಲ್ಲಿ ಏನು ಮಾಡಬೇಕು? title=
ಗೋಲ್ಡನ್‌ ಅವರ್‌ನಲ್ಲಿ ಹಣ ಉಳಿಸಿಕೊಳ್ಳಿ!

CYBER ​​FRAUD CASES: ಸೈಬರ್ ವಂಚಕರ ಬಗ್ಗೆ ಪೊಲೀಸರು ಎಷ್ಟೇ ಅರಿವು ಮೂಡಿಸುತ್ತಿದ್ದರೂ ಸಹ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪ್ರತಿನಿತ್ಯ ಹೊಸಹೊಸ ರೂಪದಲ್ಲಿ ಸಾರ್ವಜನಿಕರು ವಂಚನೆಗೆ ಒಳಾಗಾಗುತ್ತಿದ್ದಾರೆ. ಪೊಲೀಸರ ತನಿಖೆಗೂ ಸಹ ವಂಚಕರು ಸವಾಲಾಗಿದ್ದಾರೆ. ನವೆಂಬರ್ 30ರವರೆಗಿನ ದಾಖಲೆಗಳ ಪ್ರಕರಣ ಬೆಂಗಳೂರು ಒಂದರಲ್ಲೇ 16,357 ಸೈಬರ್ ವಂಚನೆ ಪ್ರಕರಣಗಳು (ತಿಂಗಳಿಗೆ ಸರಾಸರಿ 1,360) ದಾಖಲಾಗಿದ್ದು, ಬರೋಬ್ಬರಿ 1800,57,17,886 ಕೋಟಿ ರೂ. ಹಣ ವಂಚಕರ ಪಾಲಾಗಿದೆ. ಈ ಪೈಕಿ 716 ಪ್ರಕರಣಗಳನ್ನ ಪತ್ತೆ ಹಚ್ಚಿರುವ ಬೆಂಗಳೂರು ಪೊಲೀಸರು 298 ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಬ್ಯಾಂಕ್‌ ಖಾತೆಗಳಲ್ಲಿದ್ದ 641,96,65,859 ಕೋಟಿ ರೂ. ಹಣವನ್ನ ಫ್ರೀಜ್‌ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೈಬರ್‌ ವಂಚನೆ ಪ್ರಕರಣಗಳು 2024
ದಾಖಲಾದ ಪ್ರಕರಣಗಳು 16,357
ಪತ್ತೆಯಾದ ಪ್ರಕರಣಗಳು 716 
ಬಂಧಿತರು  298
ಕಳೆದುಕೊಂಡ ಹಣ  1800.57 ಕೋಟಿ
ತಡೆಹಿಡಿಯಲಾದ ಹಣ  641.96 ಕೋಟಿ
ಸೈಬರ್‌ ವಂಚನೆ ಪ್ರಕರಣಗಳು 2023
ದಾಖಲಾದ ಪ್ರಕರಣಗಳು  17,633
ಪತ್ತೆಯಾದ ಪ್ರಕರಣಗಳು  3,403
ಬಂಧಿತರು  399
ಕಳೆದುಕೊಂಡ ಹಣ  673.03 ಕೋಟಿ
ತಡೆಹಿಡಿಯಲಾದ ಹಣ  306.44 ಕೋಟಿ
ಸೈಬರ್‌ ವಂಚನೆ ಪ್ರಕರಣಗಳು  2022
ದಾಖಲಾದ ಪ್ರಕರಣಗಳು  9,938
ಪತ್ತೆಯಾದ ಪ್ರಕರಣಗಳು  3,403
ಬಂಧಿತರು  323
ಕಳೆದುಕೊಂಡ ಹಣ  271.89 ಕೋಟಿ
ತಡೆ ಹಿಡಿಯಲಾದ ಹಣ  79.82 ಕೋಟಿ

ಇದನ್ನೂ ಓದಿ: 2024ರಲ್ಲಿ ಸಂಭವಿಸಿರುವ ಅಪಘಾತಗಳ ಅಂಕಿಅಂಶ ಬಿಡುಗಡೆ: 824 ಗಂಭೀರ ಅಪಘಾತ, 845 ಜನ ಸಾವು

ದಿನೇ ದಿನೇ ತಂತ್ರಜ್ಞಾನ ಬದಲಾಗುವಂತೆ ಸೈಬರ್ ವಂಚನೆಯ ವಿಧಾನಗಳು ಬದಲಾಗುತ್ತಿವೆ. ತನಿಖಾ ಸಂಸ್ಥೆಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್, ಕ್ರಿಪ್ಟೋ ಕರೆನ್ಸಿ ಮತ್ತಿತರ ಉದ್ಯಮಗಳಲ್ಲಿ ಹಣ ಹೂಡಿಕೆ, ಸುಲಭದ ಟಾಸ್ಕ್ ಪೂರ್ಣಗೊಳಿಸಿ ಲಾಭ ಗಳಿಕೆ, ಕ್ರೆಡಿಟ್ ಕಾರ್ಡ್ ಆಮಿಷ, KYC ಅಪ್ಡೇಟ್‌ ಹೆಸರಿನ ವಂಚನೆಗಳು ಹೆಚ್ಚುತ್ತಿವೆ. ವಂಚಕರ ಮಾತು ನಂಬಿ ಅನೇಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ವಿದ್ಯಾವಂತರೇ ಹೆಚ್ಚು ವಂಚಕರ ಜಾಲಕ್ಕೆ ಸಿಲುಕಿಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ಸಂಗತಿಯಾಗಿದೆ. 

ಗೋಲ್ಡನ್ ಅವರ್ ಬಹು ಮುಖ್ಯ

ಸೈಬರ್ ವಂಚಕರು ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಚೇಂಜ್, KYC ಅಪ್ಡೇಟ್ ಸೋಗಿನಲ್ಲಿ SMS ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ. ಈ ಸಮಯದಲ್ಲಿ ವಂಚನೆಗೊಳಗಾದ ನಂತರದ ಒಂದು ಗಂಟೆಯ ಅವಧಿಯನ್ನ 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಗೋಲ್ಡನ್ ಅವರ್ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿಯನ್ನು ಆಧರಿಸಿ ಹಣ ವರ್ಗಾವಣೆಯಾದ ಖಾತೆ ಅಥವಾ ವ್ಯಾಲೆಟ್‌ನ್ನು ಪತ್ತೆಹಚ್ಚಿ ಅದರಲ್ಲಿರುವ ಹಣವನ್ನ ಫ್ರೀಜ್ ಮಾಡುವ ಅವಕಾಶ ಹೆಚ್ಚಿರುತ್ತದೆ. ತನಿಖಾ ಸಂಸ್ಥೆಗಳು ಕ್ಷೀಪ್ರವಾಗಿ ವಂಚಕರ ಖಾತೆ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. 

ಇತ್ತೀಚೆಗೆ ಮಹಿಳೆಯೊಬ್ಬರು‌ ಕಳೆದುಕೊಂಡಿದ್ದ 3.6 ಕೋಟಿ ರೂ.ಗಳನ್ನು ಗೋಲ್ಡನ್ ಅವರ್ ಅವಧಿಯಲ್ಲಿ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದರು. ಸಾಮಾಜಿಕ ಜಾಲತಾಣದ ಜಾಹೀರಾತು ನಂಬಿದ್ದ ಮಹಿಳೆ ಆನ್‌ಲೈನ್‌ನಲ್ಲಿ 4.56 ಕೋಟಿ ಹೂಡಿಕೆ ಮಾಡಿದ್ದರು. ಆದರೆ ಲಾಭಾಂಶ ಹಿಂಪಡೆಯಲು ಸಾಧ್ಯವಾಗದಿದ್ದಾಗ ಅನುಮಾನಗೊಂಡ ಮಹಿಳೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಗೆ ದೂರು ನೀಡಿದ್ದರು. ತ್ವರಿತವಾಗಿ ತನಿಖೆ ಕೈಗೊಂಡ ಪೊಲೀಸರು, ವಂಚಕರ ಖಾತೆಗಳ ಪಾಲಾಗಿದ್ದ ಹಣದಲ್ಲಿ 3.6 ಕೋಟಿ ರೂ.ಗಳನ್ನು ಹಿಂಪಡೆದು ಮಹಿಳೆಗೆ ಹಿಂತಿರುಗಿಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿಗೆ ‘ಸುಪ್ರೀಂ’ ಶಾಕ್​​?

ಸೈಬರ್ ವಂಚನೆಗೊಳಗಾಗದಿರಲು ಏನೂ ಮಾಡಬೇಕು?

* ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು
* ನಿಮ್ಮ ಖಾತೆಗಳಿಗೆ ಕ್ಲಿಷ್ಟಕರವಾದ ಪಾಸ್‌ವರ್ಡ್, Two-Factor Authentication ಇರಿಸುವುದು
* ನಿಗದಿತವಾಗಿ ಸಾಫ್ಟ್‌ವೇರ್/ ಆ್ಯಪ್ ಅಪ್ಡೇಟ್‌ಗೊಳಿಸಬೇಕು
* ಖಾತೆಯಲ್ಲಿನ ಹಣಕಾಸು ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಬೇಕು
* ಮೊಬೈಲ್ ಹಾಗೂ ಆನ್‌ಲೈನ್‌ ಹಣಕಾಸು ವ್ಯವಹಾರದ ಬಗ್ಗೆ ಎಚ್ಚರವಿರಲಿ
* ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರವಿರಲಿ 
* ವೈಯಕ್ತಿಕ ಮಾಹಿತಿ, ದಾಖಲೆಗಳನ್ನ ಗೌಪ್ಯವಾಗಿಡುವುದು
* ಉತ್ತಮ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳನ್ನ ಬಳಸಿ ಹಾಗೂ ನಿಗದಿತವಾಗಿ ಅಪ್ಡೇಟ್ ಮಾಡಿ
* ಯಾವುದೇ ವಂಚನೆಗಳಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ (1930) ಸಂಪರ್ಕಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News