ದಕ್ಷಿಣ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಪವಿತ್ರ ಮಾಸ ಶ್ರಾವಣ ಪ್ರಾರಂಭವಾಗುತ್ತದೆ. ಇನ್ನು ಉತ್ತರ ಭಾರತದಲ್ಲಿ ಈಗಾಗಲೇ ಶ್ರಾವಣ ಆಚರಿಸುತ್ತಿದ್ದು, ಇಂದು ಅಲ್ಲಿ ಶ್ರಾವಣ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇನ್ನು ಈ ಶಿವರಾತ್ರಿಯಂದು ಜಲಾಭಿಷೇಕ ಮತ್ತು ರುದ್ರಾಭಿಷೇಕ ಮಾಡಲಾಗುತ್ತದೆ. ಇದಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಈ ತಿಂಗಳು ಸಂಪೂರ್ಣ ಶಿವನಿಗೆ ಸಮರ್ಪಿತವಾಗಿದೆ.
ಶಿವಲಿಂಗಕ್ಕೆ ಕುದಿಸಿದ ಹಾಲಿನ ಅಭಿಷೇಕ ಮಾಡಬೇಡಿ. ಶಿವರಾತ್ರಿಯ ದಿನ ಶಿವನನ್ನು ಪ್ರತಿಷ್ಠಾಪಿಸುವಾಗ, ಹಾಲನ್ನು ಕುದಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಶಿವಲಿಂಗಕ್ಕೆ ಯಾವಾಗಲೂ ತಣ್ಣೀರು ಮತ್ತು ಹಸಿ ಹಾಲಿನಿಂದ ಅಭಿಷೇಕ ಮಾಡಬೇಕು.
ಅರಿಶಿನವನ್ನು ಅರ್ಪಿಸಬಾರದು: ಅರಿಶಿನವನ್ನು ಶಿವನಿಗೆ ಅರ್ಪಿಸುವುದಿಲ್ಲ. ಅರಿಶಿನವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ್ದಾಗಿದ್ದು ಶಿವನಿಗೆ ಅರ್ಪಣೆ ಮಾಡಬಾರದು. ನೀವು ಹೀಗೆ ಮಾಡಿದರೆ ನಿಮ್ಮ ರಾಶಿಯಲ್ಲಿನ ಚಂದ್ರನು ದುರ್ಬಲನಾಗಲು ಪ್ರಾರಂಭಿಸುತ್ತಾನೆ.
ಶಿವಲಿಂಗಕ್ಕೆ ತುಳಸಿಯನ್ನು ಅರ್ಪಿಸಬೇಡಿ: ವಿಷ್ಣುವು ತುಳಸಿಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದ್ದಾನೆ. ಹೀಗಾಗಿ ಶಿವನಿಗೆ ತುಳಸಿಯಿಂದ ಅರ್ಪಿಸಿ ಪೂಜಿಸುವುದಿಲ್ಲ.
ಪಾತ್ರೆಯು ತಾಮ್ರದಿಂದ ಮಾಡಿರಬೇಕು: ಶಿವನಿಗೆ ನೀರನ್ನು ಅರ್ಪಿಸುವಾಗ ತಾಮ್ರದ ಪಾತ್ರೆಯನ್ನು ಬಳಕೆ ಮಾಡಬೇಕು. ತಾಮ್ರದ ಪಾತ್ರೆಯಲ್ಲಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಲಾಗುತ್ತದೆ. ಹಿತ್ತಾಳೆಯ ಪಾತ್ರೆಯಿಂದ ಹಾಲು ನೈವೇದ್ಯವನ್ನು ಸಮರ್ಪಿಸಲಾಗುತ್ತದೆ.
ಶಿವನಿಗೆ ಎಳ್ಳನ್ನು ಅರ್ಪಿಸಬೇಡಿ: ಎಳ್ಳು ಅಥವಾ ಎಳ್ಳಿನಂತಹ ವಸ್ತುವು ವಿಷ್ಣುವಿನ ಕೊಳಕಿನಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಇದನ್ನು ಶಿವನಿಗೆ ಅರ್ಪಿಸುವುದಿಲ್ಲ.