ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 49 ರನ್‌ಗಳಿಂದ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಗೆಲುವಿನ ನಂತರ ಎಂಎಸ್ ಧೋನಿ ಆಟಗಾರರನ್ನು ಭೇಟಿಯಾಗಲು ಬಂದಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಶಾನ್ ಕಿಶನ್, ಯುಜ್ವೇಂದ್ರ ಚಾಹಲ್ ಮತ್ತು ರಿಷಬ್ ಪಂತ್ ಸೇರಿದಂತೆ ಭಾರತೀಯ ಆಟಗಾರರೊಂದಿಗೆ ಧೋನಿ ಸಂವಾದ ನಡೆಸಿದ ಚಿತ್ರಗಳನ್ನು ಹಂಚಿಕೊಂಡಿದೆ.
ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕೆ ಇಳಿದಿದ್ದರು.
ಭಾರತ ಸರಣಿ ಗೆದ್ದ ನಂತರ, ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಆಟಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಇಶಾನ್ ಕಿಶನ್‌ಗೆ ಕೆಲ ಟಿಪ್ಸ್ ಕೂಡ ನೀಡಿದ್ದಾರೆ.
ಇಶಾನ್ ಕಿಶನ್‌ಗೆ ಎರಡನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಅವರ ಸ್ಥಾನದಲ್ಲಿ ರಿಷಬ್ ಪಂತ್‌ಗೆ ಓಪನಿಂಗ್ ಅವಕಾಶ ಸಿಕ್ಕಿದೆ. ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಧೋನಿ ಮೆಂಟರ್ ಪಾತ್ರ ವಹಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ. ಎರಡನೇ ಟಿ20 ಪಂದ್ಯದಲ್ಲಿ ಭಾರತ 49 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಬಿರುಸಿನ ಆಟ ಪ್ರದರ್ಶಿಸಿದರು. ಜಸ್ಪ್ರೀತ್ ಬುಮ್ರಾ 3 ಮತ್ತು ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು.
ಈ ವಾರದ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಪತ್ನಿ ಸಾಕ್ಷಿಯೊಂದಿಗೆ ಇಂಗ್ಲೆಂಡ್‌ಗೆ ಆಗಮಿಸಿದ್ದಾರೆ. ಈ ಜೋಡಿಯು ಜುಲೈ 4 ರಂದು ತಮ್ಮ 12 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಲೆಜೆಂಡರಿ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಜುಲೈ 7 ರಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.