ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಆತ್ಮೀಯ ಸ್ವಾಗತ ಕೋರಿದರು.
ಬೆಂಗಳೂರು: ರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದರು. ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು.
ಇಂದು ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.#DraupadiMurmu pic.twitter.com/N81Zl9p1G5
— Basavaraj S Bommai (@BSBommai) July 10, 2022
ರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದ್ರೌಪದಿ ಮುರ್ಮುಗೆ ಭಾನುವಾರ ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ ನಾಯಕರು ಈ ವೇಳೆ ಉಪಸ್ಥಿತರಿದ್ದರು.
ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಕಿಶನ್ ರೆಡ್ಡಿ ಉಪಸ್ಥಿತರಿದ್ದರು.
ಬೆಂಗಳೂರಿಗೆ ಬಂದ ನಂತರ ದ್ರೌಪದಿ ಮುರ್ಮು ಅವರು ನಗರದ ಶಾಂಗ್ರೀಲಾ ಹೋಟೆಲ್ಗೆ ತೆರಳಿದರು. ಈ ವೇಳೆ ಆದಿವಾಸಿ ಕಲಾತಂಡಗಳು ಅವರನ್ನು ಭರಮಾಡಿಕೊಂಡರು.
ಶಾಂಗ್ರೀಲಾ ಹೋಟೆಲ್ನಲ್ಲಿ ದ್ರೌಪದಿ ಮುರ್ಮು ಅವರು ಬಿಜೆಪಿ ಶಾಸಕರು, ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ತಮ್ಮ ಪರ ಮತಯಾಚಿಸಲಿದ್ದಾರೆ. ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಂಡ್ಯ ಸಂಸದೆ ಸುಮಲತಾರನ್ನು ಭೇಟಿ ಮಾಡಿ ಬೆಂಬಲ ಕೋರುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಭಾರತದ 16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿಯು ಜುಲೈ 24 ರಂದು ಕೊನೆಗೊಳ್ಳುತ್ತದೆ. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ.