ಬೆಂಗಳೂರಿನ ಪ್ರತಿಷ್ಠಿತ ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಅಧ್ಯಯನ ಮಾಡುವಾಗ, ಎರಡು ವಿಮಾನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹರಿಯಾಣದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಸೂರ್ಯ ಕಿರಣ್ ಯುದ್ಧ ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಆತ್ಮಕ್ಕೆ ಶಾಂತಿ ಕೋರಿ 'ಏರೋ ಇಂಡಿಯಾ 2019' ಉದ್ಘಾಟನಾ ಸಮಾರಂಭದಲ್ಲಿ ಎರಡು ನಿಮಿಷ ಮೌನಾಚರಿಸಲಾಯಿತು. ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದರು. 36 ವರ್ಷ ವಯಸ್ಸಿನ ವಿಂಗ್ ಕಮಾಂಡರ್ ಸಾಹೀಲ್ ಗಾಂಧಿ ಅವರು ಹರಿಯಾಣ ನಿವಾಸಿಯಾಗಿದ್ದಾರೆ.
ಸಾಹಿಲ್ ಗಾಂಧಿ 1982 ರ ನವೆಂಬರ್ 18 ರಂದು ಹಿಸಾರ್ನಲ್ಲಿ ಜನಿಸಿದರು. ಅವರು ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಶಾಲೆಯಲ್ಲಿ 12 ನೇ ತರಗತಿಯವರೆಗೂ ಅಧ್ಯಯನ ಮಾಡಿದರು. ಇದರ ನಂತರ, ನ್ಯಾಷನಲ್ ಅಕಾಡೆಮಿಯಿಂದ ಫೈಲಟ್ ಆಗಿ ಕನಸು ಹೊತ್ತು ಬಂದ ಸಾಹಿಲ್ 2004 ರ ಜೂನ್ 19 ರಂದು ಸುಖೋಯ್ 30 ರ ಪೈಲಟ್ ಆಗಿ ವಾಯುಸೇನೆಗೆ ಕಾಲಿಟ್ಟಿದ್ದರು. ಏರ್ ಫೋರ್ಸ್ ನಲ್ಲಿ ವಿಂಗ್ ಕಮಾಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಸದ್ಯ ಕರ್ನಾಟಕದ ಬೀದರ್ ನಲ್ಲಿ ವಾಸವಾಗಿದ್ದರು.
2009 ರಲ್ಲಿ, ಸಾಹಿಲ್ ಹಿಮಾನಿಯವರನ್ನು ವಿವಾಹವಾದರು, ಅಮೆರಿಕದ ಕಂಪನಿಯಲ್ಲಿ ಹಮೀನಾ ಕೆಲಸ ಮಾಡುತ್ತಾರೆ. ಸಾಹಿಲ್ ಗೆ 5 ವರ್ಷದ ರಿಯಾನ್ ಎಂಬ ಮಗನಿದ್ದಾನೆ.
ಸಾಹಿಲ್ ಅವರ ಹಿರಿಯ ಸಹೋದರ ನಿತಿನ್ ಸ್ವಿಟ್ಜರ್ಲ್ಯಾಂಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿಲ್ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದರು, ಕೆಲದಿನಗಳ ಹಿಂದೆ ನಿವೃತ್ತರಾಗಿದ್ದಾರೆ. ಅವರ ತಾಯಿ ಸುದೇಶ್ ಗಾಂಧಿ ಹರಿಯಾಣ ಕೃಷಿ ವಿಶ್ವವಿದ್ಯಾಲಯದಲ್ಲಿ ಹೋಮ್ ಸೈನ್ಸ್ ಕಾಲೇಜ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಾಹಿಲ್ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಸಾಹಿಲ್ ಪತ್ನಿ, ಪುತ್ರ ಮತ್ತು ಸಹೋದರ ಭಾರತಕ್ಕೆ ಬರುತ್ತಿದ್ದಾರೆ. ಸಾಹಿಲ್ 7 ನೇ ವಯಸ್ಸಿನಲ್ಲೇ ಏರ್ ಫೋರ್ಸ್ ಸೇರುವ ಕನಸು ಕಂಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಸೂರ್ಯಕಿರಣ್ ವಿಮಾನ 2011ರಲ್ಲಿ ಕೊನೆಯದಾಗಿ ಪ್ರದರ್ಶನ ನೀಡಿತ್ತು. ಅದಾಗಿ ಆರು ವರ್ಷಗಳ ನಂತರ 2017ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಸಾಹಿಲ್ ಗಾಂಧಿ ನೇಮಕವಾಗಿದ್ದರು. 2017ರಲ್ಲಿ ವೈಮಾನಿಕ ಪ್ರದರ್ಶನ ರದ್ದು ಮಾಡಲು ಹೊರಟಿದ್ದ ಸೂರ್ಯಕಿರಣ್ ವಿಮಾನವನ್ನ ಮತ್ತೆ ಪ್ರದರ್ಶನ ಮಾಡುವಂತೆ ಮಾಡಿದ ಲೀಡರ್ ಸಾಹಿಲ್ ಗಾಂಧಿ.
ಸಾಹಿಲ್ ಗಾಂಧಿ ಅನುಭವಿ ಪೈಲಟ್ ಆಗಿದ್ದು, ಸೂರ್ಯ ಕಿರಣ್ ತಂಡದೊಡನೆ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದರು. ಯಾವಾಗಲೂ ವಿಭಿನ್ನವಾದ ಮತ್ತು ರಿಸ್ಕ್ ತೆಗೆದುಕೊಳ್ಳುವಂತ ಕೆಲಸದಲ್ಲಿ ಸಾಹಿಲ್ ತೊಡಗುತ್ತಿದ್ದರು.
ಸದಾ ವಿಭಿನ್ನವಾದ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಸಾಹಿಲ್, ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಸ್ಟಂಟ್ ಮಾಡಬೇಕೆಂದಿದ್ದರಂತೆ. ಆದರೆ ಅವರ ಕನಸು ಜೆಟ್ ಅವಘಡದ ಮೂಲಕ ಕಮರಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.